ನ್ಯೂಸ್

ಚುನಾವಣೆ ಬಯಸುತ್ತಿದೆ ಜನಪ್ರಿಯ ಘೋಷಣೆ

2024ರ ಸಾರ್ವತ್ರಿಕ ಚುನಾವಣೆಯ ಮೊದಲು ತನ್ನ ಕೊನೆಯ ಪೂರ್ಣ ಬಜೆಟ್​ನಲ್ಲಿ ಜನಪರ ಕ್ರಮಗಳನ್ನು ಘೊಷಿಸುವ ಒತ್ತಡಕ್ಕೆ ಕೇಂದ್ರ ಸರ್ಕಾರವು ಒಳಗಾಗಬಹುದಾಗಿದೆ. ಆದರೆ, ಹಣಕಾಸಿನ ಬಲವರ್ಧನೆ ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಕ್ರಮ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ, ಹದಗೆಡುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ಸೇರಿದಂತೆ ಅನೇಕ ಆರ್ಥಿಕ ಅಂಶಗಳು ಜನಪ್ರಿಯ ಬಜೆಟ್​ನ ಸಾಧ್ಯತೆಗೆ ಅಡಚಣೆಗಳಾಗಿವೆ. ಇಂತಹ ಪ್ರತಿಕೂಲ ವಾತಾವರಣವಿದ್ದರೂ ಅನೇಕ ನಿರೀಕ್ಷೆಗಳನ್ನು ಸಾರ್ವಜನಿಕರು ಇಟ್ಟುಕೊಂಡಿದ್ದಾರೆ.

ಆದಾಯ ತೆರಿಗೆ ವಿನಾಯಿತಿ

| ಜಗದೀಶ ಬುರ್ಲಬಡ್ಡಿ

ಬಜೆಟ್​ನಲ್ಲಿ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ನಾಗರಿಕರು ಮತ್ತು ತಜ್ಞರು ಎಂದಿನಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ, ಆದಾಯ ತೆರಿಗೆ ಸಲ್ಲಿಸುವಾಗ ಎರಡು ತೆರಿಗೆ ಪದ್ಧತಿಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದರಲ್ಲಿ ರೂ. 2.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದ್ದರೆ, ಇನ್ನೊಂದರಲ್ಲಿ ರೂ. 5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ. ಆದಾಯ ತೆರಿಗೆಯನ್ನು ಪ್ರಮುಖವಾಗಿ ಪಾವತಿಸುವ ಸಂಬಳದಾರರು ಮೂಲ ತೆರಿಗೆ ವಿನಾಯಿತಿಯನ್ನು -ಠಿ;2.5 ಲಕ್ಷದಿಂದ ಕನಿಷ್ಠ -ಠಿ;5 ಲಕ್ಷ ಏರಿಸಬೇಕೆಂದು ಬಯಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವು ಮಧ್ಯಮ ವರ್ಗದ ಮೇಲೆ ಯಾವುದೇ ತೆರಿಗೆ ಹೊರೆ ಹಾಕಿಲ್ಲ, ಆದರೆ, ಇತ್ತೀಚಿನ ವರ್ಷಗಳಲ್ಲಿ ನಾಗರಿಕರಿಗೆ ಹೆಚ್ಚಿನ ಹಣದುಬ್ಬರ ಮತ್ತು ಆದಾಯದ ಬೆಳವಣಿಗೆಯ ನಿಧಾನಗತಿಯನ್ನು ನಿಭಾಯಿಸಲು ಸಹಾಯ ಮಾಡುವ ಯಾವುದೇ ಕ್ರಮಗಳನ್ನು ಘೊಷಿ ಸಿಲ್ಲ ಎಂದು ಕೆಲವು ದಿನಗಳ ಹಿಂದೆ ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಹಳೆಯ ಆದಾಯ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗುವ ಸೆಕ್ಷನ್ 80ಸಿ ಮತ್ತು 80ಡಿ ಸೇರಿದಂತೆ ಆದಾಯ ತೆರಿಗೆ ಕಾಯ್ದೆಯ ಸಾಮಾನ್ಯ ವಿಭಾಗಗಳ ಅಡಿಯಲ್ಲಿ ಕಡಿತಗಳನ್ನು ಹೆಚ್ಚಿಸಲು ತೆರಿಗೆ ತಜ್ಞರು ಸರ್ಕಾರವನ್ನು ಕೇಳಿದ್ದಾರೆ. ತೆರಿಗೆ ಸ್ಲಾ್ಯಬ್​ಗಳನ್ನು ಪರಿಷ್ಕರಿಸುವುದು ಮತ್ತು ಐಚ್ಛಿಕ ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ತೆರಿಗೆ ದರಗಳನ್ನು ಕಡಿಮೆ ಮಾಡುವುದು ಇತರ ಕೆಲವು ಸಲಹೆಗಳಾಗಿವೆ.

ಗ್ರಾಮೀಣ ಮತ್ತು ಕಲ್ಯಾಣ ಖರ್ಚು: ಹಿಂದಿನ ಚುನಾವಣಾ ಪೂರ್ವ ಬಜೆಟ್​ಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಸರ್ಕಾರಗಳು ಸಾಮಾನ್ಯವಾಗಿ ಗ್ರಾಮೀಣ ಮತ್ತು ಕಲ್ಯಾಣ ವೆಚ್ಚಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಕಂಡುಬರುತ್ತದೆ. 2024ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಈ ಬಜೆಟ್​ನಲ್ಲಿ ಗ್ರಾಮೀಣ ಮತ್ತು ಕಲ್ಯಾಣ ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಗೋಲ್ಡ್​ಮನ್ ಸ್ಯಾಚ್ಸ್ ವರದಿ ಕೂಡ ಅಂದಾಜಿಸಿದೆ.

ಸ್ಥಳೀಯ ಉತ್ಪಾದನೆಗೆ ಬೆಂಬಲ: ಬಜೆಟ್​ನಲ್ಲಿ ಸ್ಥಳೀಯ ಉತ್ಪಾದನೆಯು ದೊಡ್ಡ ಉತ್ತೇಜನವನ್ನು ಪಡೆಯುವ ನಿರೀಕ್ಷೆಯಿದೆ. ಸರ್ಕಾರವು ತನ್ನ ಯಶಸ್ವಿ ಉತ್ಪಾದನೆ ಸಂಯೋಜಿತ ಪೋ›ತ್ಸಾಹ (ಪಿಎಲ್​ಐ) ಯೋಜನೆಯ ವ್ಯಾಪ್ತಿಯಲ್ಲಿ ಹೆಚ್ಚಿನ ವಲಯಗಳನ್ನು ಸೇರಿಸಲಿದೆ ಎನ್ನಲಾಗಿದೆ. ಈಗಾಗಲೇ ಈ ಯೋಜನೆಯ ವ್ಯಾಪ್ತಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಹಾರ್ಡ್​ವೇರ್ ತಯಾರಿಕೆಯಂತಹ ಕೆಲವು ವಲಯಗಳು ಹೆಚ್ಚಿನ ಹಂಚಿಕೆ ಪಡೆಯಬಹುದು.

2022ರ ಬಜೆಟ್​ನಲ್ಲಿ ಸರ್ಕಾರವು ಪಿಎಲ್​ಐ ಯೋಜನೆಗೆ ಒಟ್ಟು 1.97 ಲಕ್ಷ ಕೋಟಿ ರೂ. ಒದಗಿಸಿದೆ. ಚೀನಾವನ್ನು ಎದುರಿಸಲು ಮತ್ತು ಜಾಗತಿಕ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಯೋಜಿಸುತ್ತಿರುವುದರಿಂದ ಪಿಐಎಲ್ ಮೊತ್ತವನ್ನು ಶೆ. 20- 30ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

ಬಜೆಟ್​ನ ಪ್ರಾಥಮಿಕ ಗಮನವು ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ-ಚಾಲಿತ ಬೆಳವಣಿಗೆಯ ಮೇಲೆ ಇರುತ್ತದೆ. ಗ್ರಾಮೀಣ ವಲಯದಲ್ಲಿ ಖರ್ಚು ಮಾಡುವುದು ಮತ್ತು ಮೂಲ ಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದು ಬಜೆಟ್​ನ ಮಹತ್ವದ ಕ್ರಮಗಳಾಗಿವೆ. | ಬಿ ಗೋಪಕುಮಾರ್ ಆಕ್ಸಿಸ್ ಸೆಕ್ಯುರಿಟೀಸ್ ಎಂಡಿ ಮತ್ತು ಸಿಇಒ

ಮೂಲಸೌಕರ್ಯಕ್ಕೆ ಹಂಚಿಕೆ: ಮೂಲಸೌಕರ್ಯವು ಬೆಳವಣಿಗೆಯ ದೊಡ್ಡ ಚಾಲಕ ಶಕ್ತಿಯಾಗಿದ್ದು, ಉದ್ಯೋಗಗಳನ್ನು ಸೃಷ್ಟಿಸಲು ಅನುಕೂಲವಾಗುತ್ತವೆ. 2023-24ರಲ್ಲಿ ಬೆಳವಣಿಗೆಯ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ವಲಯಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಹಂಚಿಕೆ ಘೊಷಿಸಬಹುದು.

ಪ್ರವಾಸೋದ್ಯಮ ಕಡೆಗಣನೆ: 5 ಕೋಟಿ ಜನರಿಗೆ ಉದ್ಯೋಗ, ಭಾರತದ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ. 10ರಷ್ಟು ಕೊಡುಗೆ ಮತ್ತು ದೇಶದ ಪರೋಕ್ಷ ತೆರಿಗೆಯ ಬಹುಪಾಲು ಪ್ರವಾಸೋದ್ಯಮ ವಲಯದಿಂದಲೇ ಬರುತ್ತದೆ. ಆದರೆ, ಈ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಲಭ್ಯವಾಗುವ ಮೊತ್ತವು ಅಂದಾಜು 2,000 ಕೋಟಿ ರೂಪಾಯಿ ಮಾತ್ರ. ಈ ವಲಯವನ್ನು ಮುಂದಿನ ಎರಡು ವರ್ಷಗಳ ಕಾಲ ಆದ್ಯತೆಯ ಕ್ಷೇತ್ರವೆಂದು ಘೊಷಿಸಿ ಕೈಗಾರಿಕಾ ಸ್ಥಾನಮಾನ ನೀಡಬೇಕು. ತೆರಿಗೆ ವಿನಾಯಿತಿಗಳ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಪೋ›ತ್ಸಾಹಿಸಬೇಕು ಎಂಬುದು ತಜ್ಞರ ಅಭಿಮತ.

ಹಡಗು ಸಾರಿಗೆಗೆ ಪ್ರೋತ್ಸಾಹ ಅಗತ್ಯ: ಕಳೆದ ವರ್ಷ ನಾವು ಅಂದಾಜು 86 ಶತಕೋಟಿ ಡಾಲರ್ (7,01,033 ಕೋಟಿ ರೂಪಾಯಿ) ಅನ್ನು ಸಾರಿಗೆ ಸರಕು ಸಾಗಣೆ ಶುಲ್ಕವಾಗಿ ನೀಡಿದ್ದೇವೆ. ನಮ್ಮ ರಫ್ತು ಹೆಚ್ಚುತ್ತಿರುವುದನ್ನು ಪರಿಗಣಿಸಿದರೆ ಮುಂದೆ ಈ ಮೊತ್ತವು 100 ಶತಕೋಟಿ ಡಾಲರ್ (8,15,155 ಕೋಟಿ ರೂಪಾಯಿ) ದಾಟುತ್ತದೆ. ಭಾರತೀಯ ಹಡಗುಗಳನ್ನು ಹೊಂದುವ ಮೂಲಕ ಈ ವ್ಯವಹಾರದಲ್ಲಿ ಶೇ. 25ರಷ್ಟಾದರೂ ಪಾಲನ್ನು ಪಡೆದರೂ ವರ್ಷಕ್ಕೆ ಅಂದಾಜು 25 ಶತಕೋಟಿ ಡಾಲರ್ (2,03,789 ಕೋಟಿ) ಹಣವನ್ನು ಉಳಿಸುತ್ತೇವೆ. ಇದರಿಂದಾಗಿ ವಿದೇಶಿ ಹಡಗುಗಳ ಅವಲಂಬನೆ ಕಡಿಮೆ ಆಗುವುದಲ್ಲದೆ, ಉದ್ಯೋಗ ಸೃಷ್ಟಿಗೂ ನೆರವಾಗುತ್ತದೆ ಎಂದು ಪರಿಣತರು ಸಲಹೆ ನೀಡುತ್ತಾರೆ.

ಹಲವು ನಿರೀಕ್ಷೆಗಳು

  • ರೈಲ್ವೆ, ರಕ್ಷಣೆ, ವಿಮಾನ ನಿಲ್ದಾಣ, ನೀರಾವರಿ, ಶಿಕ್ಷಣ, ಆರೋಗ್ಯ ಮತ್ತು ರಸ್ತೆಗಳಿಗೆ ಹೆಚ್ಚಿನ ಹಂಚಿಕೆ.
  • ತೆರಿಗೆ ಸ್ಲ್ಯಾಬ್​, ಕಡಿತಗಳನ್ನು ಹೆಚ್ಚಿಸುವ ಮೂಲಕ ನೌಕರರ ವರ್ಗಕ್ಕೆ ಕೊಡುಗೆ.
  • ಎಲೆಕ್ಟ್ರಿಕಲ್ ವಾಹನ ಚಾರ್ಜಿಂಗ್​ಗಾಗಿ ಮೂಲಸೌಕರ್ಯ ಅಭಿವೃದ್ಧಿಗೆ ನೆರವು.
  • ಮನೆ ಖರೀದಿದಾರರು ಗೃಹ ಸಾಲದ ಮೇಲೆ ಪಾವತಿಸಿದ ಅಸಲು ಮೊತ್ತಕ್ಕೆ ಸೆಕ್ಷನ್ 80ಸಿ ಅಡಿಯಲ್ಲಿ ರೂ 1.5 ಲಕ್ಷವರೆಗೆ ಪ್ರಸ್ತುತ ಪಡೆಯುವ ಆದಾಯ ತೆರಿಗೆ ವಿನಾಯಿತಿಯನ್ನು ರೂ 3 ಲಕ್ಷಕ್ಕೆ ಹೆಚ್ಚಿಸುವುದು.
  • ಆದಾಯ ತೆರಿಗೆ ಪಾವತಿಯಲ್ಲಿ ಪರಿಗಣಿಸಲಾಗುವ ಮನೆ ಬಾಡಿಗೆ ಭತ್ಯೆ ದರಗಳಲ್ಲಿ ಪರಿಷ್ಕರಣೆ.
  • 4.07 ಲಕ್ಷ ಕೋಟಿ ರೂಪಾಯಿ ವಹಿವಾಟಿನೊಂದಿಗೆ ಭಾರತದ ಜಿಡಿಪಿಗೆ ಶೇ. 2ರಷ್ಟು ಕೊಡುಗೆ ನೀಡುತ್ತಿರುವ ಔಷಧ ಉದ್ಯಮಕ್ಕೆ ಪ್ರೋತ್ಸಾಹ ಹಾಗೂ ಸಂಶೋಧನೆಗೆ ಪ್ರತ್ಯೇಕ ನಿಧಿ.