ನ್ಯೂಸ್

ಹೊಸದೃಷ್ಟಿ ಉತ್ಸಾಹದತ್ತ ರಂಗಭೂಮಿ; ಇಂದು ವಿಶ್ವ ರಂಗಭೂಮಿ ದಿನ

Webdesk - Ravikanth

ಕಾವ್ಯೇಷು ನಾಟಕಂ ರಮ್ಯಂ ಎಂಬ ಕಾಳಿದಾಸನ ಮಾತಿನಂತೆ ನಾಟಕವು ಮನಸೆಳೆಯುವ ರಮಣೀಯವಾದ ದೃಶ್ಯ ಮಾಧ್ಯಮ. ಆದರೆ ಕರೊನಾ ಸೋಂಕಿನಿಂದಾಗಿ ಕಳೆದ ಒಂದು ವರ್ಷ ರಂಗಭೂಮಿ ನಿಶ್ಶಬ್ದವಾಗಿತ್ತು. ಈಗ ಮರುಜನ್ಮ ಪಡೆದ ರೀತಿಯಲ್ಲಿ ರಂಗ ಚಟುವಟಿಕೆ ಪ್ರಾರಂಭವಾಗಿದೆ. ಅನೇಕರು ರಂಗಭೂಮಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೇ ತಮ್ಮ ಕಾರ್ಯಕ್ಷೇತ್ರವೆಂದು ಹಗಲಿರುಳು ರಂಗಭೂಮಿಯ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ. ಇಂತಹ ಬಹಳಷ್ಟು ಕಲಾಜೀವಿಗಳು ಕರೊನಾ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಂತೂ ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ, ಕರೊನಾ ಕಾಲಘಟ್ಟದ ನಂತರ ರಂಗಭೂಮಿ ಹೇಗಿದೆ, ಹೇಗೆ ಮುನ್ನಡೆಯಬೇಕು ಎಂಬ ಬಗ್ಗೆ ರಾಜ್ಯದ ರಂಗಭೂಮಿಯ ಕೆಲವು ದಿಗ್ಗಜರು ಇಲ್ಲಿ ಮಾತನಾಡಿದ್ದಾರೆ.

ನಿರೂಪಣೆ: ಕೆ.ಬಿ. ಶುಭ

ಶೋ ಮಸ್ಟ್ ಗೋ ಆನ್

ಹವ್ಯಾಸಿ ರಂಗಭೂಮಿ ಕಲಾವಿದರು ಹಾಗೂ ತಂತ್ರಜ್ಞರಿಗಿಂತ ವೃತ್ತಿ ರಂಗಭೂಮಿ ಹಾಗೂ ಪೌರಾಣಿಕ ರಂಗಭೂಮಿ ಕಲಾವಿದರು ಮತ್ತು ತಂತ್ರಜ್ಞರು ಸಾಕಷ್ಟು ತೊಂದರೆ ಎದುರಿಸಿದರು. ಅದರಲ್ಲೂ ಮಹಿಳಾ ಕಲಾವಿದರು ಅತೀವ ಸಂಕಷ್ಟ ಎದುರಿಸಿದರು. ಈ ಸಂದರ್ಭದಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು ಧನಸಹಾಯದ ಜತೆಗೆ ಫುಡ್ಕಿಟ್​ಗಳನ್ನು ನೀಡಿದವು. ಸರ್ಕಾರವೂ ಸ್ವಲ್ಪ ಮಟ್ಟಿಗೆ ನೆರವಾಯಿತು. ಈಗ ರಂಗಭೂಮಿ ಚಟುವಟಿಕೆ ಪ್ರಾರಂಭಿಸಿದೆ. ಆದರೆ ಮತ್ತೆ 2ನೇ ಅಲೆಯ ಕರೊನಾ ಹೆಸರಲ್ಲಿ ರಂಗಮಂದಿರಗಳಲ್ಲಿ ಸೀಟನ್ನು ಶೇಕಡ 50ಕ್ಕೆ ಇಳಿಸಿದೆ. ಇದರಿಂದ ಮತ್ತೆ ಆತಂಕ ಎದುರಾಗಿದೆ. ರಂಗಮಂದಿರಕ್ಕೆ ಬರಲು ವೀಕ್ಷಕರಲ್ಲೂ ಒಂದು ರೀತಿಯ ಅಳುಕಿದೆ. ಆದರೆ ‘ಶೋ ಮಸ್ಟ್ ಗೋ ಆನ್’ ಎಂಬ ಸಂದೇಶದ ಆಧಾರದ ಮೇಲೆ ನಾವು ರಂಗಚಟುವಟಿಕೆಗಳನ್ನು ಮುನ್ನಡೆಸಬೇಕು. ಕರೊನಾದಂತಹದೇ ಸಂಕಷ್ಟ ಮುಂದೆಯೂ ಯಾವತ್ತಾದರೂ ಎದುರಾಗಬಹುದು. ಆ ಸಂದರ್ಭವನ್ನು ಎದುರಿಸಲು ಕಲಾವಿದರು, ತಂತ್ರಜ್ಞರು ಜಾಣತನದಿಂದ ಸ್ವಲ್ಪ ಉಳಿತಾಯ ಮಾಡಿಟ್ಟುಕೊಳ್ಳಬೇಕು. ಕರೊನಾದಂಥ ಕಷ್ಟವನ್ನು ಎದುರಿಸಿದ್ದು ನನ್ನ ವೃತ್ತಿ ಅನುಭವದಲ್ಲಿ ಇದೇ ಮೊದಲ ಬಾರಿ. ಹಾಗಾಗಿ ಬದುಕಿಗೆ ಇತರ ವೃತ್ತಿಗಳ ಕಲಿಕೆಯೂ ಅಗತ್ಯವಿದೆ.

| ಬಿ.ವಿ. ರಾಜಾರಾಂ

ಸಮುದಾಯ ರಂಗಭೂಮಿ ಬೆಳೆಯಬೇಕು

ನಾಟಕ ಮಾಡುವವರಿಗೆ, ನಾಟಕ ಮಾಡುವ ಜಾಗಗಳಿಗೆ ಕೊರತೆ ಇಲ್ಲ. ನಾಟಕ ನೋಡುವವರ ದೊಡ್ಡ ಕೊರತೆ ಇದೆ. 1000 ಆಸನ ಇರುವ ರಂಗಮಂದಿರಕ್ಕೆ ಸರಾಸರಿ 50 ಜನ ಬರುತ್ತಾರೆ ಎಂದರೆ ವೀಕ್ಷಕರ ಕೊರತೆ ಎಷ್ಟಿದೆ ಎಂಬುದನ್ನು ಗಮನಿಸಿ. ಜನರೇ ಬರದಿದ್ದರೆ ನಾವು ಬದುಕುವುದು ಹೇಗೆ? ವಿಶ್ವದಾದ್ಯಂತ ಕಮ್ಯುನಿಟಿ ಥಿಯೇಟರ್ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ಅಪಾರ್ಟ್​ವೆುಂಟ್ ಎಂದರೆ ಒಂದು ಊರಿಗೆ ಸಮ. ಅಂತಹ ಸ್ಥಳಗಳಲ್ಲಿ ಕಮ್ಯುನಿಟಿ ಥಿಯೇಟರ್ ಬೆಳೆಯಬೇಕು. ಇದರ ಜತೆಗೆ ತಾಂತ್ರಿಕತೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕಿದೆ. ಲಾಕ್​ಡೌನ್ ಸಮಯದಲ್ಲಿ ಕೆಲವರಿಗೆ ನಾಟಕದ ವಿಡಿಯೋ ಕಳಿಸಿದ್ದೆ. ಅವರು 2 ಗಂಟೆ ಕೂತು ನಾಟಕ ನೋಡಿ, ಬಹಳ ಚೆನ್ನಾಗಿತ್ತು ಎಂದು ಫೋನ್ ಮಾಡಿ ಹೇಳಿದರು. ಹಾಗಾಗಿ ಡಿಜಿಟಲ್ ಮಾರ್ಗಗಳನ್ನೂ ಬಳಸಬೇಕಿದೆ. ಕಲಾವಿದರಿಗೆ ದೊಡ್ಡ ವೇತನ ಇರುವುದಿಲ್ಲ. ಅವರು ದುಡಿಯುವುದು ಆಯಾ ದಿನದ ಬದುಕಿಗೆ ಸಾಕಾಗುತ್ತದೆ. ಹಾಗಾಗಿ ಸರ್ಕಾರ ಕಲಾವಿದರಿಗೆ ವೈದ್ಯಕೀಯ ಸೌಲಭ್ಯ ನೀಡುವುದರ ಜತೆಗೆ ಸಂಕಷ್ಟ ಸಮಯದಲ್ಲಿ ಸಹಾಯಕ್ಕೆ ಧಾವಿಸಬೇಕು. ನೇಪಥ್ಯದಲ್ಲಿ ಕೆಲಸ ಮಾಡುವವರನ್ನು ಅಸಂಘಟಿತ ಕಾರ್ವಿುಕರೆಂದು ಪರಿಗಣಿಸಿ, ಸವಲತ್ತು ನೀಡಬೇಕು.

| ಶಶಿಧರ ಅಡಪ

ಕಸುಬು ಆಧಾರಿತ ಶಿಕ್ಷಣ ಅಗತ್ಯ

ಯಾವುದೋ ಒಂದು ದಿನವನ್ನು ‘ರಂಗಭೂಮಿ ದಿನ’ ಅಂತ ಆಚರಿಸುವುದಕ್ಕೆ ನನ್ನ ಸಹಮತ ಇಲ್ಲ. ನಮಗೆ ಪ್ರತಿದಿನವೂ ರಂಗಭೂಮಿ ದಿನವೇ. ಕರೊನಾ ಸೋಂಕಿನಿಂದ ಕಳೆದ ಒಂದು ವರ್ಷ ರಂಗಭೂಮಿ ಸಂಪೂರ್ಣ ಸ್ತಬ್ಧವಾಗಿತ್ತು. ನಾವು ಕಲಿತ ವಿದ್ಯೆ ಯಾವುದಕ್ಕೂ ಬರುವುದಿಲ್ಲ ಎನ್ನುವುದು ಈ ಸಂದರ್ಭದಲ್ಲಿ ಅರಿವಿಗೆ ಬಂತು. ಹಾಗಾಗಿ ರಂಗಭೂಮಿ ಕಲೆಯ ಜತೆಗೆ ದಿನದ ಊಟಕ್ಕಾಗಿ ಕೃಷಿ, ಮರಗೆಲಸ ಸೇರಿದಂತೆ ತಮಗೆ ಸರಿಹೊಂದುವ ಯಾವುದಾದರೂ ಉಪ ಕಸುಬನ್ನು ಕಲಿತಿರಬೇಕು. ಪ್ರಸ್ತುತ ಸಾಮಾನ್ಯ ಶಿಕ್ಷಣದ ಜತೆಗೆ ಕಸುಬು ಆಧಾರಿತ ಶಿಕ್ಷಣವನ್ನು ಸರ್ಕಾರವೇ ಕಲಿಸಬೇಕು. 1960ರ ದಶಕದಲ್ಲಿ ನಮಗೆ ಜನರಲ್ ಶಿಕ್ಷಣದ ಜತೆಗೆ ಕಾರ್ಪೆಂಟರಿ, ಹಾರ್ಟಿಕಲ್ಚರ್, ಮೆಕ್ಯಾನಿಕಲ್ ಮುಂತಾದ ವಿಷಯಗಳನ್ನೂ ಕಲಿಸುತ್ತಿದ್ದರು. ಇದರಲ್ಲಿ ಯಾವುದಾದರೂ ಒಂದು ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕಿತ್ತು. ಇಂತಹ ಶಿಕ್ಷಣ ಇದ್ದಾಗ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದು. ಆದ್ದರಿಂದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಸುಬು ಆಧಾರಿತ ಶಿಕ್ಷಣವನ್ನು ಸೇರಿಸಬೇಕಿದೆ.

| ಚಿದಂಬರ ರಾವ್ ಜಂಬೆ

ಗುರಿ ದೊಡ್ಡದಿದ್ದರೂ ಜೀವನ ಅತಂತ್ರ

ಕಲಾವಿದರು, ತಂತ್ರಜ್ಞರು ಸಾಕಷ್ಟು ಹೊಸ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಕರೊನಾದಂಥ ದುಗುಡಗಳು ಅವರ ಯೋಜನೆಗಳನ್ನು ಸಾಕಾರ ಮಾಡಲು ಬಿಡುತ್ತಿಲ್ಲ. ಗುರಿ ದೊಡ್ಡದಿದೆ. ಆದರೆ ಸಾಧಿಸಲು ಆಗದೆ ಇರುವ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ವೃತ್ತಿ ರಂಗಭೂಮಿಯವರು ಒಂದು ಊರಿಗೆ ಹೋಗಿ ಕಾರ್ಯಕ್ರಮ ಕೊಡಲು ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತಾರೆ, ಆಗ ಕಾರ್ಯಕ್ರಮ ರದ್ದು ಮಾಡಬೇಕು ಎಂದು ಪೊಲೀಸರು ಆದೇಶಿಸಿದಾಗ ಅವರ ಜೀವನ ಹೇಗೆ? ತಂತ್ರಜ್ಞರಿಂದ ಹಿಡಿದು ಕಾವಲುಗಾರನವರೆಗೆ ಎಲ್ಲರಿಗೂ ತಂಡದವರು ವೇತನ ನೀಡಲೇಬೇಕು. ರಂಗಪ್ರಯೋಗಕ್ಕೆ ಅವಕಾಶ ಇಲ್ಲ ಎನ್ನುವಾಗ ಇವರು ಜೀವನ ನಡೆಸುವುದೇ ಕಷ್ಟ. ಕಲಾವಿದರು, ತಂತ್ರಜ್ಞರು ಸಾಕಷ್ಟು ಹೊಸ ಕಲ್ಪನಾಶಕ್ತಿಯೊಂದಿಗೆ ಮತ್ತೆ ಕಾರ್ಯಕ್ಕೆ ಮರಳುತ್ತಿದ್ದಾರೆ. ಆದರೆ ಸಹಕಾರ ಸಿಗುತ್ತಿಲ್ಲ. ಅವರ ಭವಿಷ್ಯದ ಬಗ್ಗೆ ಚಿಂತಿಸುವವರು ಇಲ್ಲದಂತಾಗಿದೆ. ಸರ್ಕಾರವೇ ಬೆಂಬಲಕ್ಕೆ ನಿಲ್ಲಬೇಕಿದೆ.

| ಮಾಲತಿ ಸುಧೀರ್

ಹೊಸ ಪ್ರಯೋಗಗಳಿಗೆ ಮುಕ್ತ

ಇಂದಿನ ರಂಗಭೂಮಿ ಚಟುವಟಿಕೆಯಲ್ಲಿ ಯುವ ಸಮುದಾಯದ ಸಂಖ್ಯೆ ಹೆಚ್ಚಾಗಿದೆ. ಪ್ರಯೋಗಗಳಲ್ಲಿ ಹೊಸತನ, ಸ್ತ್ರೀಸಂವೇದನೆ, ತಂತ್ರಜ್ಞಾನ, ಪಾಶ್ಚಾತ್ಯ ಸಂಸ್ಕೃತಿ ಎಲ್ಲವೂ ಯುವಪೀಳಿಗೆಯನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ, ಆಡಳಿತ, ಆರಕ್ಷಕ ವ್ಯವಸ್ಥೆ, ಮಹಿಳೆ, ಪರಿಸರ ಹೀಗೆ ಎಲ್ಲವೂ ರಂಗಭೂಮಿಯ ವಿಷಯಗಳಾಗಿ ಹೊಸ ಹೊಸ ಪ್ರಯೋಗಗಳು ತೆರೆಗೆ ಬರಲಿವೆ. ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಯೋಜನೆಗಳನ್ನು ಮಾಡಿಕೊಳ್ಳಬೇಕಿದೆ. ರಂಗಕರ್ವಿುಗಳಿಗೆ ವೇತನ ಕಡಿಮೆ, ಖರ್ಚು ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ರಂಗ ಚಟುವಟಿಕೆಗಳ ಜತೆಗೆ ಹೇಗೆ ಸಂದರ್ಭಗಳನ್ನು ಎದುರಿಸಬೇಕು ಎಂಬುದನ್ನು ಕರೊನಾ ಕಲಿಸಿದೆ. ಲಾಕ್​ಡೌನ್ ಆದಾಗ ದೇವರಿಗೇ ಡಿಜಿಟಲ್ ಆರತಿ, ವರ್ಚುವಲ್ ದರ್ಶನ ಪ್ರಾರಂಭವಾಯಿತು. ಅದೇ ರೀತಿ ರಂಗಭೂಮಿಗೂ ಈಗ ಡಿಜಿಟಲ್ ಟಚ್ ದೊರೆತಿದೆ. ಸರ್ಕಾರದ ಯೋಜನೆಗಳೆಲ್ಲ ಕೇವಲ ಆಶ್ವಾಸನೆಗಳಾಗಿಯೇ ಉಳಿಯುತ್ತಿವೆ. ಹಾಗಾಗಿ ರಂಗಕರ್ವಿುಗಳು ತಮ್ಮ ಮುಂದಿನ ದಿನಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಾವೇ ಕಲಿಯಬೇಕಿದೆ. ಸಂದರ್ಭಗಳು ಎಲ್ಲವನ್ನೂ ಕಲಿಸುತ್ತವೆ.

| ಸಿ.ಬಸವಲಿಂಗಯ್ಯ

ಹೊಸ ದಾರ್ಶನಿಕತೆ ದರ್ಶನ!

ಕಾಲರಾ ಮತ್ತು ಇತರ ಕೆಲವು ರೋಗಗಳು ಹೇಗೆ ನಮ್ಮ ಜತೆ ಇವೆಯೋ ಹಾಗೆ ಕರೊನಾ ಅನ್ನುವುದೂ ಮುಂದೆ ಸದಾ ನಮ್ಮ ಜತೆ ಇರುತ್ತದೆ. ರಂಗಭೂಮಿಗೆ ಒಂದು ವರ್ಷ ಉಸಿರು ಬಿಗಿ ಹಿಡಿದಂತಾಗಿತ್ತು. ಈಗ ಉಸಿರಾಡಲು ಪ್ರಾರಂಭಿಸಿದೆ. ಪೂರ್ಣಪ್ರಮಾಣದಲ್ಲಿ ರಂಗ ಚಟುವಟಿಕೆ ಆರಂಭವಾದರೆ ಇಷ್ಟು ದಿನಗಳಿಗಿಂತ ಹೆಚ್ಚಿನ ವೇಗದಲ್ಲಿ, ಹೊಸ ರೀತಿಯಲ್ಲಿ ಪ್ರಾರಂಭವಾಗಲಿದೆ. ಪ್ರಯೋಗಗಳ ಸಂಖ್ಯೆ ಹೆಚ್ಚಾಗುವುದಕ್ಕಿಂತ ಗುಣಮಟ್ಟದ ಪ್ರಯೋಗಗಳು ಹೆಚ್ಚಾಗುತ್ತವೆ. ವಿಶ್ವಯುದ್ಧವಾದಾಗ ಹೇಗೆ ರಂಗಭೂಮಿ ಎಕ್ಸ್​ಪ್ರೆಷನ್ ಬೇರೆ ಆಯಿತೋ ಹಾಗೆಯೇ ಕರೊನಾ ನಂತರ ಎಲ್ಲರೂ ಹೊಸ ದಾರ್ಶನಿಕತೆ ಪಡೆದುಕೊಂಡಿದ್ದಾರೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಹೊಸ ಆಲೋಚನೆ, ಹೊಸ ಪ್ರಯೋಗಗಳು ಬರಲಿವೆ. ಕಷ್ಟದ ಕಾಲದಲ್ಲಿ ಸರ್ಕಾರ ತಮ್ಮ ಕಡೆ ಗಮನ ಕೊಡುವುದಿಲ್ಲ ಎನ್ನುವುದು ಎಲ್ಲ ಕಲಾವಿದರಿಗೂ, ರಂಗಕರ್ವಿುಗಳಿಗೂ, ತಂತ್ರಜ್ಞರಿಗೂ ಅರ್ಥವಾಗಿದೆ. ಆದ್ದರಿಂದ ತಮ್ಮ ಜೀವನದ, ಭವಿಷ್ಯದ ಚಿಂತನೆಯನ್ನು ತಾವೇ ಮಾಡಿಕೊಂಡಿದ್ದಾರೆ.

| ಸುರೇಶ್ ಅನಗಳ್ಳಿ