ಕೂಷ್ಮಾ ಎಂದರೆ ಕುಂಬಳಕಾಯಿ. ಕುಂಬಳಕಾಯಿ ಈಕೆಗೆ ಪ್ರಿಯವಾದುದು. ಅಂಡ ಎಂದರೆ ಬ್ರಹ್ಮಾಂಡ. ಈಕೆಯ ನಗುವಿನಿಂದ ಬ್ರಹ್ಮಾಂಡದ ಸೃಷ್ಟಿಯಾಯಿತು ಎಂದು ಪುರಾಣಗಳು ನಮಗೆ ತಿಳಿಸುತ್ತವೆ. ಆದ್ದರಿಂದ ಆದಿಶಕ್ತಿಯ ಈ ಸ್ವರೂಪವನ್ನು ಕೂಷ್ಮಾಂಡಾ ಎಂಬ ಹೆಸರಿನಿಂದ ಕರೆಯುತ್ತಾರೆ.
ಸುರಾಸಂಪೂರ್ಣಕಲಶಂ
ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ
ಕೂಷ್ಮಾಂಡಾ ಶುಭದಾಸ್ತು ಮೇ ||
ಕಮಂಡಲು, ಕಮಲ, ಬಿಲ್ಲು-ಬಾಣ, ಅಮೃತ ಕಲಶ, ಜಪಮಾಲೆಯನ್ನು ಈಕೆ ಕೈಗಳಲ್ಲಿ ಧರಿಸಿದ್ದಾಳೆ. ಎಂಟು ಕೈಗಳನ್ನು ಉಳ್ಳವಳಾದ್ದರಿಂದ ಇವಳನ್ನು ಅಷ್ಟಭುಜಾದೇವಿ ಎಂದೂ ಕರೆಯುತ್ತಾರೆ. ಕೂಷ್ಮಾಂಡಾದೇವಿ ಸೂರ್ಯಲೋಕದಲ್ಲಿ ನೆಲೆಸಿರುವಳು. ಈಕೆಯ ಸ್ವರ್ಣಮಯ ಕಾಂತಿ ಸೂರ್ಯನಿಗಿಂತಲೂ ಹೆಚ್ಚಾಗಿ ಪ್ರಜ್ವಲಿಸುತ್ತದೆ. ಈಕೆಯ ತೇಜಸ್ಸಿನಿಂದಲೇ, ಸಮಸ್ತ ಲೋಕಗಳೂ ಪ್ರಕಾಶಗೊಳ್ಳುತ್ತಿವೆ.
ಈ ದೇವಿಯನ್ನು ಪೂಜಿಸುವುದರಿಂದ ವ್ಯಾಧಿಗಳಿಂದ ಮುಕ್ತರಾಗಬಹುದು. ಸುಖ-ಸಮೃದ್ಧಿಯನ್ನು ಪಡೆಯಬಹುದು. ಸಾಧಕನು ಚತುರ್ಥಿಯಂದು ಶ್ರದ್ಧಾ-ಭಕ್ತಿಗಳಿಂದ ಈಕೆಯನ್ನು ಆರಾಧಿಸಿದಾಗ, ಅವನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆಸುತ್ತದೆ. ಅನಾಹತ ಚಕ್ರವನ್ನು ಹೃದಯ ಚಕ್ರ ಎಂದೂ ಕರೆಯುತ್ತಾರೆ. ಇದು ಎದೆಯ ಮಧ್ಯಭಾಗದಲ್ಲಿರುತ್ತದೆ. ಈ ಚಕ್ರದ ಬಣ್ಣ ಹಸಿರು. ಅನಾಹತ ಚಕ್ರ ಪ್ರೀತಿ ಹಾಗೂ ವಾತ್ಸಲ್ಯದೊಂದಿಗೆ ಗುರುತಿಸಿಕೊಂಡಿದೆ. ಈ ತಾಯಿ ಭಕ್ತಿಗೆ ಬಹಳ ಬೇಗ ಪ್ರಸನ್ನಳಾಗುತ್ತಾಳೆ ಎಂಬುದು ವಿಶೇಷ. ಸಿಂಹವಾಹಿನಿಯಾಗಿ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.
ಕೂಷ್ಮಾಂಡಾ ದೇವಿ ಕವಚ
ಹಂಸರೈ ಮೇ ಶಿರ ಪಾತು ಕೂಷ್ಮಾಂಡೆ ಭವನಾಶಿನಿಮ್
ಹಸಲಕರಿಂ ನೇತ್ರೇಚ, ಹಸರೌಷ್ಚ ಲಲಾಟಕಮ್
ಕೌಮಾರಿ ಪಾತು ಸರ್ವಗಾತ್ರೆ, ವಾರಾಹಿ ಉತ್ತರೆ ತಥಾ,
ಪೂರ್ವೆ ಪಾತು ವೈಷ್ಣವಿ ಇಂದ್ರಾನಿ ದಕ್ಷಿಣೆ ಮಮ
ದಿಗ್ವಿದಿಕ್ಷು ಸರ್ವತ್ರೇವ ಕೂಮ್ ಬಿಜಮ್ ಸರ್ವದಾವತು
ದೇವಿ ಕೂಷ್ಮಾಂಡಾ ಮಂತ್ರ:
ಓಂ ದೇವಿ ಕೂಷ್ಮಾಂಡೈ ನಮಃ