ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಧಾಟಿ ನಿಗದಿಪಡಿಸಬೇಕೆಂಬ ಒಂದೂವರೆ ದಶಕದ ಬೇಡಿಕೆ ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದ್ದು, ಖ್ಯಾತ ಸುಗಮ ಸಂಗೀತ ಗಾಯಕ ದಿವಂಗತ ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲಿ ಎರಡೂವರೆ ನಿಮಿಷಕ್ಕೆ ಹಾಡಬಹುದು ಎಂದು ರಾಜ್ಯ ಸರ್ಕಾರ ರಚಿಸಿದ್ದ 17 ಜನರ ಸಮಿತಿ ಸರ್ವಾನುಮತದ ಶಿಫಾರಸು ಮಾಡಿದೆ.
ನಾಡಗೀತೆ ಎಂದು ಘೋಷಣೆಯಾಗುವುದಕ್ಕೂ ಮೊದಲಿನಿಂದಲೇ ನಾಡಿನಾದ್ಯಂತ ಗೀತೆಯನ್ನು ಹಾಡಿ ಪ್ರಚುರಪಡಿಸಿದ್ದ ಅನಂತಸ್ವಾಮಿಯವರಿಗೆ ಗೌರವ ನೀಡುವುದರ ಜತೆಗೆ ಮಕ್ಕಳು, ವಯೋವೃದ್ಧರೆನ್ನದೆ ಎಲ್ಲರೂ ಹಾಡಬಹುದಾದ ಸರಳ ಧಾಟಿ ಎಂಬ ಕಾರಣಕ್ಕೆ ಸಂಶೋಧಕಿ ಡಾ. ಎಸ್. ಆರ್. ಲೀಲಾ ಅಧ್ಯಕ್ಷತೆಯ ಸಮಿತಿ ಗುರುವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸೆ.9ರಂದು ರಚನೆಯಾಗಿದ್ದ ಸಮಿತಿ: ನಾಡಗೀತೆಗೆ ಧಾಟಿ ನಿಗದಿಪಡಿಸಬೇಕೆಂಬ ಅನೇಕ ವರ್ಷಗಳ ಆಗ್ರಹವಿದ್ದರೂ ನನೆಗುದಿಗೆ ಬಿದ್ದಿದ್ದ ವಿಷಯವನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಇತ್ತೀಚೆಗೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರು, ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆಯನ್ನು ಆ.24ರಂದು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನಾಡಗೀತೆಗೆ ಧಾಟಿ ಹಾಗೂ ಹಾಡುವ ಸಮಯವನ್ನು ನಿಗದಿಪಡಿಸಲು ಎಸ್. ಆರ್.ಲೀಲಾ ಅಧ್ಯಕ್ಷತೆಯಲ್ಲಿ 17 ಜನರ ಸಮಿತಿಯನ್ನು ಇಲಾಖೆ ಸೆ.9ರಂದು ರಚಿಸಿತ್ತು. 15 ದಿನಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಸಮಿತಿಯಲ್ಲಿ ಡಾ. ದೊಡ್ಡರಂಗೇಗೌಡ, ಡಾ. ಬಿ.ಕೆ. ಸುಮಿತ್ರಾ, ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್, ಬಿ.ಆರ್. ಲಕ್ಷ್ಮಣರಾವ್, ಬಾಲಸುಬ್ರಹ್ಮಣ್ಯ(ಬಾಲಿ), ಇಂದು ವಿಶ್ವನಾಥ್, ಬಿ. ವಿ. ಶ್ರೀನಿವಾಸ್, ವಿ. ಮನೋಹರ್, ಸಂಗೀತಾ ಕಟ್ಟಿ, ಹೊ. ನಾ. ರಾಘವೇಂದ್ರ ರಾವ್, ಶಂಕರ ಶಾನುಭಾಗ್, ಗಣೇಶ್ ದೇಸಾಯಿ, ಯಲ್ಲನಗೌಡ ಶಂಕರ್ ಬಂಡೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿದ್ದರು.
ಎರಡು ಧಾಟಿಯ ನಡುವೆ ಆಯ್ಕೆ: ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೆ ಗೀತೆಯನ್ನು ಆಯ್ದುಕೊಂಡಿದ್ದ ಅನಂತಸ್ವಾಮಿ, ರಾಜ್ಯಾದ್ಯಂತ ಕಾರ್ಯಕ್ರಮಗಳಲ್ಲಿ ಹಾಡಿ ಪ್ರಚುರಪಡಿಸಿದ್ದರು. ಆನಂತರದಲ್ಲಿ ಸರ್ಕಾರ ಗೀತೆಯನ್ನು ನಾಡಗೀತೆ ಎಂದು ಘೋಷಿಸಿತು. ಹೆಚ್ಚಿನ ಏರಿಳಿತ, ಆಲಾಪಗಳಿಲ್ಲದ ಧಾಟಿಯಾದ್ದರಿಂದ ಅನಂತಸ್ವಾಮಿ ಯವರ ಧಾಟಿಯಲ್ಲಿ ಮಕ್ಕಳು, ವೃದ್ಧರ ಜತೆಗೆ ಸಂಗೀತ ತಿಳಿದಿಲ್ಲದವರೂ ಹಾಡುವಂತಿರಬೇಕು ಎಂದು ಸುಗಮಸಂಗೀತ ವಲಯದಲ್ಲಿ ಅಭಿಪ್ರಾಯವಿತ್ತು. ಖ್ಯಾತ ಗಾಯಕ ಸಿ. ಅಶ್ವತ್ಥ್ ಧಾಟಿಯೂ ನಂತರದಲ್ಲಿ ಪ್ರಸಿದ್ಧಿಯಾಗಿದ್ದರಿಂದ ಅದನ್ನು ಅಳವಡಿಸಿಕೊಳ್ಳಬೇಕು ಎಂದೂ ಅನೇಕರು ಆಗ್ರಹಿಸಿದ್ದರು.
ಸರ್ಕಾರಿ ಕಾರ್ಯಕ್ರಮಕ್ಕಷ್ಟೇ: ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲಿ, ಯಾವುದೇ ಆಲಾಪನೆ, ಪುನರಾವರ್ತನೆ ಇಲ್ಲದೆ, ಎರಡು ನಿಮಿಷ 30 ಸೆಕೆಂಡುಗಳೊಳಗೆ ಹಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ನಿರ್ಧಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಡಲು ಮಾತ್ರ ಅನ್ವಯವಾಗುತ್ತದೆ. ಉಳಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡಿನ ರೀತಿಯಲ್ಲಿ ಯಾವುದೇ ಧಾಟಿಯನ್ನು, ಎಷ್ಟು ಸಮಯ ಬೇಕಿದ್ದರೂ ಹಾಡಬಹುದು ಎಂದು ಮೂಲಗಳು ಹೇಳಿವೆ.
ನಾಡಗೀತೆ ಎಂಬುದು ನಾಡಿನ ಎಲ್ಲರಿಗೂ ಸೇರಿದ್ದಾಗಿದ್ದು, ಹೆಚ್ಚಾಗಿ ನಾಡಗೀತೆಗೆ ಸಂಬಂಧಿಸದವರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಮುಕ್ತವಾಗಿ, ಸಾರ್ವಟಿಜನಿಕವಾಗಿ ಮಾಡಬೇಕಿದ್ದ ಚರ್ಚೆಯನ್ನು ಗುಪ್ತವಾಗಿ, ದಿಢೀರನೆ ನಡೆಸಿರುವುದು ಸರಿಯಲ್ಲ. ಒಂದು ಚರಣ,2 ಪಲ್ಲವಿಗೆ ಮಾತ್ರ ಅನಂತಸ್ವಾಮಿ ರಾಗ ಸಂಯೋಜಿಸಿದ್ದು, ಪೂರ್ಣ ನಾಡಗೀತೆಯನ್ನು ಸಿ. ಅಶ್ವತ್ಥ್ ರಾಗದಲ್ಲಿ ಹಾಡುವುದು ಬಿಟ್ಟು ವಿಧಿಯಿಲ್ಲ. ಸಮಿತಿಯ ಶಿಫಾರಸಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತೇನೆ.
| ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷ, ಆದರ್ಶ ಸುಗಮ ಸಂಗೀತ ಅಕಾಡೆಮಿ
ಅನಂತಸ್ವಾಮಿಯವರು ಮೊದಲಿಗೆ ರಾಗ ಸಂಯೋಜಿಸಿ, ನಾಡುನುಡಿ ಗೀತೆಯಾಗಿ ಪ್ರಚಾರ ಮಾಡಿದ್ದರಿಂದಲೇ ಸರ್ಕಾರದ ಗಮನಕ್ಕೆ ಬಂದಿತ್ತು. ಅವರು ಪೂರ್ಣ ಗೀತೆಗೆ ರಾಗ ಸಂಯೋಜಿಸಿ ಎಲ್ಲೆಡೆ ಹಾಡುತ್ತಿದ್ದರು. ಧ್ವನಿಮುದ್ರಿಕೆ ಮಾಡುವ ಸಂದರ್ಭದಲ್ಲಿ 4-5 ನಿಮಿಷಕ್ಕೆ ಸೀಮಿತಗೊಳಿಸಲಾಗಿತ್ತು ಅಷ್ಟೆ. ಸಮಿತಿ ಶಿಫಾರಸು ಸಂಪೂರ್ಣವಾಗಿ ಅರ್ಥಪೂರ್ಣವಾಗಿದೆ, ಸುಗಮ ಸಂಗೀತ ಕಲಾವಿದರು ಸ್ವಾಗತಿಸುತ್ತೇವೆ.
| ಆನಂದ ಮಾದಲಗೆರೆ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷರು