| ರಮೇಶ ದೊಡ್ಡಪುರ ಬೆಂಗಳೂರು
ಮೂರು ವರ್ಷಕ್ಕೆ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬೈಲಾ ಬದಲಾವಣೆಯಿಂದಾಗಿ 2021ರ ಮೇ 9ಕ್ಕೆ ನಿಗದಿಯಾಗಿ ಕರೊನಾ ಕಾರಣಕ್ಕೆ ಮುಂದೂಡಿಕೆಯಾಗಿದ್ದು ಇದೀಗ ನ.21ರಂದು ನಡೆಯಲಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಂತೆ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯಲ್ಲಿ ಮತದಾರ ರನ್ನು ತಮ್ಮತ್ತ ಸೆಳೆಯಲು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಮತದಾರರಲ್ಲೂ ಅನೇಕ ವಿಷಯಗಳ ಚರ್ಚೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕಸಾಪ ಚುನಾವಣೆ ಯಲ್ಲಿ ಸಾಮಾಜಿಕ ಜಾಲತಾಣ ಅದರಲ್ಲೂ ವಾಟ್ಸಆಪ್ ಮಾಧ್ಯಮವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸದ್ಯದ ಸ್ಥಿತಿ ಹಾಗೂ ಮುಂದಿನ ಒಂದು ತಿಂಗಳ ಪ್ರಚಾರ ಕಾರ್ಯದ ಕುರಿತು ಪ್ರಮುಖ ಅಭ್ಯರ್ಥಿಗಳು ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.
ನಾಡೋಜ ಡಾ. ಮಹೇಶ್ ಜೋಷಿ
ಈಗಾಗಲೇ 252 ತಾಲೂಕುಗಳಿಗೂ ಭೇಟಿ ನೀಡಲಾಗಿದ್ದು, ಕನ್ನಡದಲ್ಲಿ ಆದೇಶಗಳನ್ನು ನೀಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ನನ್ನ ಜತೆಗೆ ಕೈಜೋಡಿಸಿದ್ದಾರೆ. ಕಸಾಪ ಇತಿಹಾಸದಲ್ಲಿ ಇಷ್ಟು ಪ್ರವಾಸ ಮಾಡಿದ ಮೊದಲ ಆಕಾಂಕ್ಷಿ ಎಂದು ಮತದಾರರೇ ಹೇಳುತ್ತಿದ್ದಾರೆ. ಈಗಾಗಲೆ ಪ್ರವಾಸ ಮಾಡಿರುವ ತಾಲೂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪುತ್ತೇನೆ, ಪ್ರಚಾರ ಕಾರ್ಯಕ್ಕಾಗಿ 20 ಸ್ವಯಂಸೇವಕರು ಶ್ರಮಿಸುತ್ತಿದ್ದಾರೆ.
ಪ್ರಮುಖ ಆಶ್ವಾಸನೆಗಳು
- ನನ್ನ ಅವಧಿಯಲ್ಲಿ ದೂರದರ್ಶನ ಸಮೀಪವಾಯಿತು, ಅದೇ ರೀತಿ ಕಸಾಪವನ್ನು ಜನಸಾಮಾನ್ಯರ ಪರಿಷತ್ತಾಗಿ ಮಾಡುವುದು. ಆಜೀವ ಸದಸ್ಯರ ಶುಲ್ಕವನ್ನು 250 ರೂ.ಗೆ ಇಳಿಸಿ 1 ಕೋಟಿ ಸದಸ್ಯತ್ವ ಗುರಿ.
- ಕನ್ನಡ ಅನ್ನದ ಭಾಷೆಯಾಗಬೇಕು, ಆದ್ಯತೆ ಮೇಲೆ ಕನ್ನಡಿಗರಿಗೆ ಕೆಲಸ ನೀಡಬೇಕು ಎಂಬುದಕ್ಕೆ ಹೋರಾಟ. ಕನ್ನಡ ಶಾಲೆಗಳನ್ನು ಮುಚ್ಚದೇ ಇರುವ ಹೊಣೆ ತೆಗೆದುಕೊಳ್ಳುತ್ತೇನೆ.
- ಕನ್ನಡ ಸಾಹಿತ್ಯದ ಜತೆಗೆ ಸಂಸ್ಕೃತಿ ಕಲೆಯನ್ನು ಒಟ್ಟಿಗೆ ಸೇರಿಸಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಎಲ್ಲ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ.
ವ.ಚ.ಚನ್ನೇಗೌಡ
ರಾಜ್ಯಾದ್ಯಂತ ದಿನನಿತ್ಯ ಪ್ರವಾಸ, ದೂರ ವಾಣಿ ಮೂಲಕ ಮನವಿ ಮಾಡುವುದು, ವಾಟ್ಸ್ಆಪ್, ಫೇಸ್ಬುಕ್ ಬಳಸಿ ಮತದಾರರನ್ನು ತಲುಪಿ ದ್ದೇನೆ. ಈ ಹಿಂದೆ ಕೆಎಸ್ಆರ್ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿದ್ದ ಪ್ರೊ. ಚಂಪಾ ಅವರು ಒಮ್ಮೆ ಸೋಲುಂಡ ಸಂದರ್ಭ ದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ನಡೆಯಿತು. ನಂತರ ಚಂಪಾ ಅವರು ಜಯಿಸಿದರು. ಇಲ್ಲಿನ ಸಿಬ್ಬಂದಿ ಸಂಖ್ಯೆಯೇ 20 ಸಾವಿರದಷ್ಟಿದ್ದು, ಅವರನ್ನು ತಲುಪುತ್ತಿದ್ದೇನೆ. ಒಂದು ತಿಂಗಳಲ್ಲಿ ಎಲ್ಲ ಜಿಲ್ಲೆಗಳ ಭೇಟಿ ನಿಗದಿಯಾಗಿದೆ.
ಪ್ರಮುಖ ಆಶ್ವಾಸನೆಗಳು
- ಸರ್ಕಾರದ ಮೇಲೆ ಒತ್ತಡ ಹೇರಿ, ಕನ್ನಡಿಗರಿಗೆ ಉದ್ಯೋಗ ನೀಡಲು ಅನುಕೂಲವಾಗುವ ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವಂತೆ ಮಾಡುವುದು.
- ಕಸಾಪದಲ್ಲಿ ಶಾಶ್ವತವಾದ ನಿಘಂಟು ವಿಭಾಗ ತೆರೆಯುವುದು.
- ಪರಿಷತ್ ಸದಸ್ಯತ್ವ, ಪುಸ್ತಕ ಖರೀದಿ ಸೇರಿ ಎಲ್ಲ ಪ್ರಕ್ರಿಯೆಗಳೂ ಆನ್ಲೈನ್ನಲ್ಲಿ ನಡೆಯುವಂತೆ ಡಿಜಿಟಲೀಕರಣ.
ಡಾ. ಸಿ. ಕೆ. ರಾಮೇಗೌಡ
ಮುಂದಿನ 20 ದಿನಗಳವರೆಗೆ ಸಂಪೂರ್ಣ ಪ್ರವಾಸ ವೇಳಾಪಟ್ಟಿ ನಿಗದಿಯಾಗಿದ್ದು, ನಿರಂತರ ಜಿಲ್ಲಾ ಪ್ರವಾಸಗಳು ಮುಂದುವರಿ ಯುತ್ತವೆ. ಈಗಾಗಲೇ 3 ಬಾರಿ ರಾಜ್ಯ ಪ್ರವಾಸ ಆಗಿದೆ. ಎಲ್ಲ ಜಿಲ್ಲೆಯಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಕಸಾಪ ಅಭ್ಯರ್ಥಿಗಳಲ್ಲಿ ಕೆಲವರು ರಾಜಕೀಯ ಪಕ್ಷಗಳ ಬೆಂಬಲ ಪಡೆದವರಾಗಿದ್ದು, ಹೋರಾಟ ಮನೋಭಾವ ಹೊಂದಿರುವವರು ಅಧ್ಯಕ್ಷ ರಾಗಬೇಕು ಎಂದು ಮತದಾರರು ತಿಳಿಸುತ್ತಿದ್ದಾರೆ. ವಾಟ್ಸ್ಆಪ್, ಫೇಸ್ಬುಕ್ ಮೂಲಕ ಪ್ರಚಾರ ಬಹಳ ಪರಿಣಾಮಕಾರಿಯಾಗಿದ್ದು, ಭೌತಿಕವಾಗಿ ನಾನು ಭೇಟಿ ಮಾಡುವ ವೇಳೆಗೇ ಅನೇಕರಿಗೆ ಮಾಹಿತಿ ಮುಟ್ಟುತ್ತಿದೆ.
ಪ್ರಮುಖ ಆಶ್ವಾಸನೆಗಳು
- ಈಗ ಕಸಾಪ ಕೆಲವೇ ಜನರ ಪರಿಷತ್ತಾಗಿದೆ, ಇದನ್ನು ಕನ್ನಡಿಗರ ಪರಿಷತ್ತಾಗಿ ಮಾಡುತ್ತೇವೆ, ಕಟ್ಟಕಡೆಯ ಕನ್ನಡಿಗನೂ ನನ್ನ ಪರಿಷತ್ತು ಎನ್ನುವಂತೆ ಮಾಡುತ್ತೇವೆ.
- ಬೆಂಗಳೂರಿನಿಂದ ಗ್ರಾಮ ಮಟ್ಟದವರೆಗೆ ಸಾಹಿತ್ಯ ಪರಿಷತ್ ಚಟುವಟಿಕೆ ವಿಸ್ತರಿಸಲು, ತಾಲೂಕು ಘಟಕಗಳಿಗೆ ವಿಶೇಷ ಉತ್ತೇಜನ. ಇದಕ್ಕಾಗಿ ಆರ್ಥಿಕ ನೆರವು, ಸಾಹಿತ್ಯ ಭವನ ನಿರ್ಮಾಣ ಮಾಡಲಾಗುತ್ತದೆ.
- ಎಲ್ಲ ಪ್ರಸಿದ್ಧ ಸಾಹಿತಿಗಳ ಕೃತಿಗಳೂ, ಕಸಾಪ ಕೇಂದ್ರ ಕಚೇರಿಯಲ್ಲಿ ಒಂದೆಡೆ ಸಿಗುವ ವ್ಯವಸ್ಥೆ ಮಾಡಲಾಗುವುದು.
ಡಾ. ಶೇಖರಗೌಡ ಮಾಲಿಪಾಟೀಲ್
ಒಂದು ದಿನವೂ ಬಿಡುವಿಲ್ಲದ ಹಾಗೆ ಪ್ರಚಾರದಲ್ಲಿದ್ದೇನೆ. ಚುನಾವಣೆ ನಡೆಯುವ ಹಿಂದಿನ ದಿನದವರೆಗೂ ಮತದಾರರನ್ನು ತಲುಪುವ, ನನ್ನ ಆಲೋಚನೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮುಂದುವರಿಸುತ್ತೇನೆ. ಸ್ನೇಹಿತರ ಜತೆಗೆ ಸಾಹಿತ್ಯ ಬಳಗದ ಭೇಟಿ ನಿರಂತರವಾಗಿ ನಡೆಯುತ್ತಿದೆ. ಉತ್ತರ ಕರ್ನಾಟಕದವನು, ಕಲ್ಯಾಣ ಕರ್ನಾಟಕದವನು ಎಂಬ ಯಾವುದೇ ಭೇದವಿಲ್ಲದೆ ಮತದಾರರು ಆತ್ಮೀಯತೆ ತೋರುತ್ತಿರುವುದು ಗೆಲುವಿನ ಭರವಸೆ ಮೂಡಿಸಿದೆ.
ಪ್ರಮುಖ ಆಶ್ವಾಸನೆಗಳು
- ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಾಣ.
- ನಿರಂತರ ನಡೆಯುವ ಜಿಲ್ಲಾ, ತಾಲ್ಲೂಕು ಸಾಹಿತ್ಯ ಸಮ್ಮೇಳನಗಳ ಜತೆಗೆ ನಾಲ್ಕೂ ಕಂದಾಯ ವಿಭಾಗಗಳಲ್ಲೂ, ಪ್ರತಿ ವರ್ಷ ವಿಶೇಷ ಸಮಾವೇಶ. ಶಿಕ್ಷಕರ ಸಾಹಿತ್ಯದ ಕುರಿತು ಮೊದಲ ಸಮಾವೇಶ ಮೈಸೂರಿನಲ್ಲಿ.
- ಗ್ರಾಮೀಣ ಪ್ರದೇಶದ ಯುವ ಸಾಹಿತಿಗಳನ್ನು ಗುರುತಿಸಿ, ಕಥಾ, ಕಾವ್ಯ ಕಮ್ಮಟಗಳನ್ನು ಏರ್ಪಡಿಸಿ ತರಬೇತಿ ನೀಡುವುದು.
3.1 ಲಕ್ಷ ಮತದಾರರು
ರಾಜ್ಯದ ಎಲ್ಲ ತಾಲೂಕು ಕೇಂದ್ರ ಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ 27 ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಈ ಬಾರಿ 3,10,109 ಮತದಾರರು ಅರ್ಹರಾಗಿದ್ದಾರೆ. ನ.21ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ನ.24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಡೀಕರಿಸಿ ಫಲಿತಾಂಶ ಘೋಷಿಸಲಾಗುತ್ತದೆ.