ವಿಶ್ವಭ್ರಾತೃತ್ವ, ಸಮಾನತೆ, ಭಗವತ್ಪ್ರೇಮದ ಅನುಭೂತಿಯ ಕುರಿತು ಜನಸಾಮಾನ್ಯರ ಗೊಂದಲಗಳನ್ನು ಪರಿಹರಿಸಿ, ಸರಳಸುಂದರ ಪದಗಳಿಂದ ಸಕಲರಿಗೂ ಅರ್ಥವಾಗುವಂತೆ ವೇದಸುಧಾರಸವನ್ನು ಉಣಬಡಿಸಿದ ಸಿಖ್ ಪಂಥದ ಪ್ರಥಮ ಗುರು ಮಹಾತ್ಮ ಗುರುನಾನಕರು ಸತ್ಯಧರ್ವಧಿಷ್ಠಿತ ಸಮಾಜನಿರ್ವಣಕ್ಕೆ ಚಾಲನೆಯಿತ್ತ ಯುಗಪುರುಷ. 1469ರ ಕಾರ್ತಿಕ ಪೌರ್ಣಮಿಯಂದು ಅಖಂಡ ಪಂಜಾಬಿನ ತಳವಂಡಿಯ ಕಲ್ಯಾಣದಾಸ್-ತೃಪ್ತಾ ದಂಪತಿಗೆ ಜನಿಸಿದ ಗುರುನಾನಕರು ಬಾಲ್ಯದಿಂದಲೂ ಅಧ್ಯಾತ್ಮ ಜಿಜ್ಞಾಸು. ಪ್ರತಿಯೊಂದು ಆಚರಣೆಯನ್ನೂ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಶಾಲಾಶಿಕ್ಷಣದಿಂದ ಆತ್ಮವಿಕಾಸ ಅಸಾಧ್ಯವೆಂದು ಬಹುಬೇಗ ಅರಿತರು. ಮದುವೆ, ಮಕ್ಕಳೆಂಬ ಸಂಸಾರವಾರಿಧಿಯಲ್ಲಿ ಕಮಲಪತ್ರದಂತಿದ್ದು, ಆತ್ಮಜ್ಞಾನ ಪ್ರಾಪ್ತಿಯ ಸದುದ್ದೇಶದಿಂದ ಭಾರತವನ್ನು ಕೇಂದ್ರವಾಗಿ ಏಷ್ಯಾ ಖಂಡವನ್ನು ಸುತ್ತಿದರು.
ಸತ್ಯದರ್ಶನ: ಸಂಗೀತ, ಕವನ, ಹಾಡಿನ ಮೂಲಕ ಭಗವಂತನ ಸಂದೇಶವನ್ನು ಊರೂರಿಗೆ ಪಸರಿಸಿದ ಗುರುನಾನಕರು ಪ್ರೀತಿಮೈತ್ರಿ, ಸಹನೆ, ಕಾರುಣ್ಯಗಳ ಹುಡುಕಾಟದಲ್ಲಿ ಯಶಸ್ವಿಯಾದರು. ಪ್ರಾಮಾಣಿಕವಾಗಿ ದುಡಿಯುವುದು ಒಂದು ಭಾಗವಾದರೆ, ದುಡಿಮೆಯ ಸಣ್ಣ ಪಾಲನ್ನು ಆರ್ತರ ಸಮುನ್ನತಿಗಾಗಿ ಬಳಸುವುದೇ ನರ ನಾರಾಯಣನಾಗಲು ಲಭ್ಯ ಇರುವ ಸೋಪಾನ. ತನ್ನಂತೆಯೇ ಇರುವ ಇನ್ನೊಂದು ಜೀವಕ್ಕೆ ಆಸರೆಯಾಗದ ಮನೋಸ್ಥಿತಿಯುಳ್ಳವನು ಎಂದೆಂದಿಗೂ ಮಾನವ ನಾಗಲಾರನೆಂಬ ಸತ್ಯದರ್ಶನಗೈದ ಕೀರ್ತಿ ಗುರುನಾನಕರದು. ಸದ್ವರ್ತನೆಯ ಬದುಕಿನಿಂದ ಉತ್ತಮ ಜಾತಿಯೇ ಹೊರತು ಹುಟ್ಟಿನಿಂದಲ್ಲ ಎಂದು ಸಾರಿದರು. ಮಹಿಳಾಪ್ರಧಾನ ಕುಟುಂಬ ವ್ಯವಸ್ಥೆ ಯನ್ನು ರೂಪಿಸಿ, ಲಿಂಗ ಅಸಮಾನತೆಯನ್ನು ವಿರೋಧಿಸಿದ ಗುರುನಾನಕರು ಶ್ರೀಮಂತಿಕೆಯ ತೋರ್ಪಡಿಕೆಯ ಆಡಂಬರವನ್ನು ಪಾಪವೆಂದೇ ಗುರುತಿಸಿದರು. ನೊಂದವರ ಕಣ್ಣೀರೊರೆಸಲು ಉಪಯೋಗ ವಾಗದ ಸಂಪತ್ತಿಗೆ ಬೆಲೆ ನೀಡದೆ ವ್ಯಕ್ತಿಯೊಳಗೆ ಸುಪ್ತವಾಗಿರುವ ಭಗವತ್ತತ್ತ್ವದ ಅನಾವರಣಕ್ಕೆ ಒತ್ತು ನೀಡಿದರು. ಸದಾಕಾಲ ಜನರ ನಡುವಿದ್ದು ಸರಳಜೀವನದ ಮಾರ್ಗದರ್ಶಿ ಸೂತ್ರಗಳನ್ನು ಪೋಣಿಸಿದ ಅವರು ಮೊಘಲರ ದೌರ್ಜನ್ಯವನ್ನು ಖಂಡಿಸಿದರು. ಸತ್ಯದ ಹುಡುಕಾಟದಲ್ಲೇ ನಿರಂತರವಾಗಿ ತೊಡಗಿಸಿಕೊಂಡು ಸಮಾನತೆ ಹಾಗೂ ಸಹಬಾಳ್ವೆಯ ಮಂತ್ರದೊಂದಿಗೆ ಸುಗಮ ಜೀವನ ನಡೆಸುವ ಪಥವನ್ನು ಐದು ಶತಮಾನಗಳ ಹಿಂದೆಯೇ ಸೋದಾಹರಣ ವಿವರಿಸಿದ ರೀತಿ ಅನನ್ಯ.