ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ| ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮಸ್ತಸ್ಯೆ ೖ ನಮೋ ನಮಃ ||
ಯಾರು ಎಲ್ಲ ಜೀವಿಗಳಲ್ಲೂ ತಾಯಿಯಾಗಿ ನೆಲಸಿ ದ್ದಾಳೋ, ಅವಳಿಗೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು.
ತಾಯಿಯ ಗರ್ಭದಿಂದ ಹೊರಬಂದಾಗಿನಿಂದ ಮಾತೃಪ್ರೇಮದ ಅಮೃತವನ್ನು ನಾವು ಸವಿಯುತ್ತ ಬೆಳೆಯುತ್ತೇವೆ. ನಾವು ಬೆಳೆಯುತ್ತ ಆ ಮಾತೃಪ್ರೇಮವೂ ಬೆಳೆಯುತ್ತ, ವಿಸ್ತಾರವಾಗುತ್ತದೆ. ಓಡಾಡುವ ಭೂಮಿ ಭೂತಾಯಿಯಾಗಿ, ನಮ್ಮ ನಾಡು ತಾಯ್ನಾಡಾಗಿ, ದೇಶ ಭರತ ಮಾತೆಯಾಗಿ ಪೂಜಿತಳಾಗುತ್ತಾಳೆ. ಜೀವನದಲ್ಲಿ ನೆರವಾಗುವ ಅನೇಕ ಸ್ತ್ರೀಯರನ್ನು ನಾವು ತಾಯಿಯೆಂತಲೇ ಆರಾಧಿಸುತ್ತೇವೆ. ಇನ್ನು ಪರಬ್ರಹ್ಮ ಶಕ್ತಿಯು ನಮಗೆ ಜ್ಞಾನ ನೀಡಿದಾಗ ಸರಸ್ವತಿ, ಸಂಪತ್ತನ್ನು ನೀಡಿದಾಗ ಲಕ್ಷ್ಮೀ, ಶಕ್ತಿಯನ್ನು ನೀಡಿದಾಗ ಪಾರ್ವತಿ, ದುರ್ಗೆ ಹೆಸರುಗಳಿಂದ ಕರೆದು, ಅರ್ಚಿಸುತ್ತೇವೆ. ಅನಾದಿ ಕಾಲದಿಂದಲೂ ಭರತ ಭೂಮಿಯಲ್ಲಿ, ಸನಾತನ ಧರ್ಮದಲ್ಲಿ ಮಾತೃಪೂಜೆ, ದೇವಿಯ ಪೂಜೆ ವಿಶೇಷವಾಗಿ ನಡೆದುಕೊಂಡು ಬಂದಿದೆ.
ನವರಾತ್ರಿಯಲ್ಲಿ ಪ್ರತಿದಿವಸ ದುರ್ಗಾಮಾತೆಯ ಒಂದು ರೂಪವನ್ನು ಪೂಜಿಸುವುದು ನಮಗೆಲ್ಲ ತಿಳಿದಿರುವ ವಿಷಯ. ಇದರ ಉಲ್ಲೇಖವನ್ನು ಬ್ರಹ್ಮವೈವರ್ತ ಪುರಾಣದಲ್ಲಿ ಕಾಣಬಹುದು. ಅದರಲ್ಲಿ ಸ್ವಯಂ ಬ್ರಹ್ಮನೇ ಈ ಒಂಬತ್ತು ದುರ್ಗೆಯರ ಹೆಸರುಗಳನ್ನು ತಿಳಿಸಿದ್ದಾನೆ.
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||
ಪಂಚಮಂ ಸ್ಕಂದಮಾತೇತಿ ಷಷ್ಟಂ ಕಾತ್ಯಾಯನೀತಿ ಚ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಕಮ್ ||
ನವಮಂ ಸಿದ್ಧದಾ ಪ್ರೋಕ್ತಾ ನವದುರ್ಗಾಃ ಪ್ರಕೀರ್ತಿತಾಃ |
ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ||
ದುರ್ಗಾ ದೇವಿಯ ಮೊದಲ ರೂಪವನ್ನು ಶೈಲಪುತ್ರೀ ಎಂದು ಪೂಜಿಸುತ್ತಾರೆ.
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತ ಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||
ಪರ್ವತರಾಜ ಹಿಮವಂತನ ಮಗಳಾಗಿ ಜನಿಸಿದ ಶೈಲಪುತ್ರಿ ವೃಷಭಾರೂಢಳಾಗಿ (ಎತ್ತು), ಅರ್ಧಚಂದ್ರನನ್ನು ತಲೆಯಲ್ಲಿ ಧರಿಸಿದ್ದಾಳೆ. ತ್ರಿಶೂಲ ಆಯುಧವನ್ನು ಹಿಡಿದಿದ್ದಾಳೆ. ಯಶಸ್ಸನ್ನು, ನಮ್ಮ ಕಾಮನೆಗಳನ್ನು ಪೂರೈಸುವ ಶೈಲಪುತ್ರಿಗೆ ನಾನು ವಂದಿಸುತ್ತೇನೆ.
ದಕ್ಷನ ಮಗಳಾದ ಸತಿದೇವಿ ಯಜ್ಞದ ಅಗ್ನಿಯಲ್ಲಿ ಭಸ್ಮಳಾದಳು. ನಂತರ ಆದ್ಯಾಶಕ್ತಿ ಹಿಮವಂತನ ಪುತ್ರಿಯಾಗಿ ಅವತರಿಸಿದಳು. ಆದ್ದರಿಂದಲೇ ದೇವಿಯನ್ನು ಶೈಲಪುತ್ರೀ, ಪಾರ್ವತೀ, ಹೈಮಾವತೀ, ಮುಂತಾದ ಹೆಸರುಗಳಿಂದ ಕರೆಯುವುದು. ಅವಳ ಶಕ್ತಿ ಅಪರಿಮಿತವಾದುದು. ಈಕೆಯ ಕೃಪೆ ಪಡೆಯಲೆಂದು ನವರಾತ್ರಿಯ ಮೊದಲನೇ ದಿವಸವಾದ ಪಾಡ್ಯದಂದು ಸಾಧಕರು ದುರ್ಗಾ ಮಾತೆಯ ಪ್ರಥಮ ರೂಪವಾದ ಶೈಲಪುತ್ರಿಯನ್ನು ಆರಾಧಿಸುತ್ತಾರೆ. ಯೋಗಿಗಳು, ತಂತ್ರಸಾಧಕರು ಅಂದು ತಮ್ಮ ಮನಸ್ಸನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸಲು ಪ್ರಯತ್ನಿಸುತ್ತಾರೆ.