ಈ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಜನರಿಗೆ ಸಂದೇಶ ಮತ್ತು ಮಾಹಿತಿಗಳನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸವಾಗಿದೆ. ಎಷ್ಟೇ ಜಾಗ್ರತೆ ವಹಿಸಿದ್ದರೂ ಖಾಸಗಿ ಮಾಹಿತಿಗಳು ಸೋರಿಕೆಯಾಗಿ ಬಿಡುತ್ತವೆ. ಈ ನಿಟ್ಟಿನಲ್ಲಿ ಡೇಟಾ ಗೌಪ್ಯತೆಯ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಡೇಟಾ ಗೌಪ್ಯತೆ ದಿನವನ್ನು ಪ್ರತಿವರ್ಷ ಜನವರಿ 28ರಂದು ಆಚರಿಸಲಾಗುತ್ತದೆ. ನ್ಯಾಷನಲ್ ಸೈಬರ್ ಸೆಕ್ಯುರಿಟಿ ಅಲೈಯನ್ಸ್ (ಎನ್ಸಿಎಸ್ಎ) ಮತ್ತು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ರೖೆವೆಸಿ ಪ್ರೊಫೆಷನಲ್ಸ್ (ಐಎಪಿಪಿ) ಜಂಟಿಯಾಗಿ ಈ ದಿನವನ್ನು ಆಯೋಜಿಸುತ್ತವೆ.
ಆಗಾಗ್ಗೆ ಗೌಪ್ಯತೆ ನೀತಿಗಳನ್ನು ಪರಿಶೀಲಿಸುವುದು, ಡೇಟಾ ಸಂಗ್ರಹಣೆ ಅಭ್ಯಾಸಗಳನ್ನು ಪರಿಶೀಲಿಸುವುದು ಮತ್ತು ಸೂಕ್ಷ್ಮ ಡೇಟಾವನ್ನು ರಕ್ಷಿಸಲು ಸೂಕ್ತ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ.
ವೈಯಕ್ತಿಕ ಡೇಟಾ ರಕ್ಷಣೆ ಹೇಗೆ?
- ಇತ್ತೀಚಿನ ಸೆಕ್ಯುರಿಟಿ ಪ್ಯಾಚಸ್ ಮತ್ತು ಆಂಟಿ-ವೈರಸ್ ಸಾಫ್ಟ್ವೇರ್ನೊಂದಿಗೆ ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳನ್ನು ನವೀಕರಿಸಿ.
- ನಿಮ್ಮ ಪ್ರತಿಯೊಂದು ಆನ್ಲೈನ್ ಖಾತೆಗಳಿಗೆ ಪ್ರಬಲವಾದ ಮತ್ತು ವಿಶಿಷ್ಟವಾದ ಪಾಸ್ವರ್ಡ್ ಬಳಸಿ ಮತ್ತು ಅವುಗಳನ್ನು ನಿಯಮಿತವಾಗಿ ಬದಲಾಯಿಸಿ.
- ಇ-ಮೇಲ್, ಮೆಸೇಜ್ ಅಥವಾ ಸಾಮಾಜಿಕ ಮಾಧ್ಯಮ ಸಂದೇಶಗಳಲ್ಲಿನ ಲಿಂಕ್ಗಳನ್ನು ಕ್ಲಿಕ್ ಮಾಡುವಾಗ ಮತ್ತು ಡೌನ್ಲೋಡ್ ಮಾಡುವಾಗ ಜಾಗರೂಕರಾಗಿರಿ. ಅದರಲ್ಲೂ ಅಪರಿಚಿತ ಅಥವಾ ಅನುಮಾನಾಸ್ಪದ ಮೂಲಗಳಿಂದ ಬಂದಿದ್ದರೆ ವಿಶೇಷ ಎಚ್ಚರಿಕೆ ವಹಿಸಿ.
- ನಿಮ್ಮ ಆನ್ಲೈನ್ ಖಾತೆಗಳ ಭದ್ರತೆಗೆ ಸಾಧ್ಯವಿದ್ದಲ್ಲಿ ಎರಡು ಅಂಶದ ದೃಢೀಕರಣ ಬಳಸಿ.
- ನೀವು ಆನ್ಲೈನ್ನಲ್ಲಿ ಹಂಚಿಕೊಳ್ಳುವ ಮಾಹಿತಿ ಬಗ್ಗೆ ಗಮನವಿರಲಿ ಮತ್ತು ಸಾಮಾಜಿಕ ಮಾಧ್ಯಮ ಹಾಗೂ ಇತರ ಸಾರ್ವಜನಿಕ ವೆಬ್ಸೈಟ್ಗಳಲ್ಲಿ ನೀವು ಪೋಸ್ಟ್ ಮಾಡುವ ವೈಯಕ್ತಿಕ ಮಾಹಿತಿಯ ಪ್ರಮಾಣವನ್ನು ಮಿತಿಗೊಳಿಸಿ.
- ಸಾರ್ವಜನಿಕ ವೈ-ಫೈ ನೆಟ್ವರ್ಕ್ಗಳಲ್ಲಿ ಇಂಟರ್ನೆಟ್ ಬಳಸುವಾಗ ವರ್ಚುವಲ್ ಖಾಸಗಿ ನೆಟ್ವರ್ಕ್ (ವಿಪಿಎನ್ ) ಬಳಸಿ.
- ಫಿಶಿಂಗ್ ಹಗರಣಗಳ ಬಗ್ಗೆ ತಿಳಿದಿರಲಿ ಮತ್ತು ವೈಯಕ್ತಿಕ ಮಾಹಿತಿ ಕೇಳುವ, ಅಪೇಕ್ಷಿಸದ ಇ-ಮೇಲ್ಗಳು, ಪಠ್ಯ ಸಂದೇಶಗಳು ಅಥವಾ ಫೋನ್ ಕರೆಗಳ ಬಗ್ಗೆ ಜಾಗರೂಕರಾಗಿರಿ.
- ನಿಮ್ಮ ಸಾಮಾಜಿಕ ಮಾಧ್ಯಮ ಮತ್ತು ಇತರ ಆನ್ಲೈನ್ ಖಾತೆಗಳಲ್ಲಿನ ಗೌಪ್ಯತೆ ಸೆಟ್ಟಿಂಗ್ಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲಾದ ಮಾಹಿತಿಯ ಪ್ರಮಾಣವನ್ನು ಮಿತಿಗೊಳಿಸಿ.
- ಯಾವುದೇ ಅನಧಿಕೃತ ಚಟುವಟಿಕೆಗಾಗಿ ನಿಮ್ಮ ಕ್ರೆಡಿಟ್ ವರದಿಗಳು ಮತ್ತು ಹಣಕಾಸು ಹೇಳಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಿ.
- ನಿಮ್ಮ ಗೌಪ್ಯತೆ ಮತ್ತು ಭದ್ರತಾ ಸಾಫ್ಟ್ವೇರ್ ಅನ್ನು ನವೀಕೃತಗೊಳಿಸಿ. ಮಾಲ್ವೇರ್ ಅಥವಾ ಇತರ ಬೆದರಿಕೆಗಳನ್ನು ಪತ್ತೆ ಹಚ್ಚಲು ಹಾಗೂ ತೆಗೆದು ಹಾಕಲು ನಿಯಮಿತವಾಗಿ ಸ್ಕ್ಯಾನ್ ಮಾಡಿ.