ನ್ಯೂಸ್

ಸರಕು-ಸೇವೆ ಪಡೆಯುವಾಗ ಇರಲಿ ಎಚ್ಚರ..

Webdesk - Ravikanth

| ಜಗನ್ ರಮೇಶ್

ಹಣ ನೀಡಿ ಯಾವುದೇ ಸರಕು ಅಥವಾ ಸೇವೆಗಳನ್ನು ಪಡೆದುಕೊಳ್ಳುವವರು ಗ್ರಾಹಕರೆನಿಸಿಕೊಳ್ಳುತ್ತಾರೆ. ಪ್ರತಿ ವ್ಯಕ್ತಿಯೂ ತನ್ನ ದೈನಂದಿನ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕನೇ ಆಗಿರುತ್ತಾನೆ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟಕ್ಕಾಗಿ ಖರೀದಿಸುವ ದಿನಸಿ, ತರಕಾರಿಗಳು, ಹಲ್ಲುಜ್ಜುವ ಪೇಸ್ಟ್-ಬ್ರಷ್, ಕಾಫಿ/ಟೀಗೆ ಬಳಸುವ ಹಾಲು, ಸಕ್ಕರೆ, ಶಾಲೆ-ಕಾಲೇಜುಗಳಲ್ಲಿ ಪಡೆಯುವ ಶಿಕ್ಷಣ, ಓಡಾಟಕ್ಕೆ ಅವಲಂಬಿಸುವ ಸಾರಿಗೆ ವ್ಯವಸ್ಥೆ, ಹೀಗೆ ಪ್ರತಿಯೊಂದನ್ನೂ ಹಣ ಪಾವತಿ ಮಾಡಿ ಉಪಯೋಗಿಸುವ ನಾವು ಗ್ರಾಹಕರಾಗುತ್ತೇವೆ. ಆದರೆ, ವ್ಯಾಪಾರದಲ್ಲಿ ಯಾರು, ಯಾರನ್ನು, ಯಾವ ರೀತಿ ವಂಚಿಸುತ್ತಾರೆ ಹಾಗೂ ಯಾರು, ಹೇಗೆ ಮೋಸ ಹೋಗುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಗ್ರಾಹಕನೊಬ್ಬ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ವಸ್ತುಗಳನ್ನು ಖರೀದಿಸಿದರೆ, ವರ್ತಕನಾದವನು ಲಾಭದ ದೃಷ್ಟಿಯಿಂದ ಸರಕುಗಳನ್ನು ಮಾರಾಟ ಮಾಡುತ್ತಾನೆ. ಇಂಥ ವ್ಯಾಪಾರದಲ್ಲಿ ವರ್ತಕನ ಅತಿಯಾದ ಲಾಭದಾಸೆಗೆ ಗ್ರಾಹಕ ಮೋಸ ಹೋಗುವುದು ಹೊಸತೇನಲ್ಲ. ಅಂತೆಯೇ, ಪ್ರತಿ ವ್ಯಕ್ತಿಯೂ ತನ್ನದೇ ಆದ ಗ್ರಾಹಕ ಹಕ್ಕುಗಳನ್ನು ಹೊಂದಿರುತ್ತಾನೆ. ಹಣ ಪಾವತಿಸಿ ಪಡೆಯುವ ವಸ್ತು ಅಥವಾ ಸೇವೆಗಳ ಗುಣಮಟ್ಟದಲ್ಲಿ ದೋಷವಿದ್ದರೆ ಅದಕ್ಕಾಗಿ ಪರಿಹಾರ ಪಡೆಯುವ ಸಂಪೂರ್ಣ ಹಕ್ಕು ಗ್ರಾಹಕನಿಗಿರುತ್ತದೆ. ವ್ಯಾಪಾರದಲ್ಲಾಗುವ ವಂಚನೆಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವ ಅನಿವಾರ್ಯತೆ ಮನಗಂಡ ಸರ್ಕಾರ, 1986ರ ಡಿ.24ರಂದು ಗ್ರಾಹಕರ ಸಂರಕ್ಷಣಾ ಅಧಿನಿಯಮವನ್ನು ಸಂಸತ್​ನಲ್ಲಿ ಜಾರಿಗೆ ತಂದಿತು. ಖರೀದಿಸಿದ ವಸ್ತು ದೋಷಪೂರಿತವಾಗಿದ್ದರೆ ಅಥವಾ ಪಡೆದ ಸೇವೆಯಲ್ಲಿ ನ್ಯೂನತೆ ಇದ್ದರೆ ಈ ಕಾನೂನಿನಡಿಯಲ್ಲಿ ಪರಿಹಾರ ಪಡೆಯಲು ಗ್ರಾಹಕ ಅರ್ಹನಾಗಿರುತ್ತಾನೆ. ಕಾನೂನು ಅನುಷ್ಠಾನಕ್ಕೆಂದೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳೆಂಬ ಮೂರು ಹಂತದ ವ್ಯವಸ್ಥೆ ರೂಪಿಸಲಾಗಿದೆ.

ಪರಿಹಾರ ಪಡೆಯುವುದು ಹೇಗೆ?: ಖರೀದಿಸಿದ ವಸ್ತು ಅಥವಾ ಪಡೆದ ಸೇವೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ತೃಪ್ತಿ ಸಿಗದಿದ್ದಲ್ಲಿ, ಗ್ರಾಹಕನಿಗೆ ಅನ್ಯಾಯಕ್ಕೊಳಗಾಗಿದ್ದೇನೆ ಎನಿಸಿದಾಗ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಬಹುದು. ಆದರೆ, ಅದಕ್ಕೂ ಮುನ್ನ ವರ್ತಕರಿಗೆ ಖುದ್ದಾಗಿ ಅಥವಾ ವಕೀಲರ ಮೂಲಕ ನೋಟಿಸ್ ಜಾರಿಗೊಳಿಸಿ, ತಮಗಾದ ಸಮಸ್ಯೆ ಹಾಗೂ ಆ ಸಮಸ್ಯೆಗೆ ಪರಿಹಾರ ಕೋರಬೇಕು. ನೋಟಿಸ್ ನೀಡಿದ 15 ದಿನಗಳ ಒಳಗೆ ಉತ್ತರ ಬಾರದಿದ್ದಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ ಪರಿಹಾರ ಕೋರಬಹುದು. ವಸ್ತುಗಳನ್ನು ಇಂಥ ವರ್ತಕರಿಂದಲೇ ಖರೀದಿಸಲಾಗಿದೆ ಎಂಬುದನ್ನು ಸಾಬೀತು ಪಡಿಸುವ ರಸೀದಿ ಹಾಗೂ ಇತರ ದಾಖಲೆಗಳನ್ನು ಕಡ್ಡಾಯವಾಗಿ ದೂರಿನೊಂದಿಗೆ ಲಗತ್ತಿಸಬೇಕು. ಖರೀದಿ/ಸೇವೆ ಪಡೆದ ದಿನದಿಂದ 2 ವರ್ಷಗಳ ಒಳಗೆ ಯಾವಾಗ ಬೇಕಿದ್ದರೂ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದು.

ಕಾಯ್ದೆಯಲ್ಲಿ ಬದಲಾವಣೆ

ಕಾಲ ಬದಲಾದಂತೆ ಮನುಷ್ಯನ ಜೀವನಶೈಲಿ ಬದಲಾಗುತ್ತದೆ. ವ್ಯಾಪಾರ ಪದ್ಧತಿಯಲ್ಲೂ ಬದಲಾವಣೆಗಳು ಕಾಣುತ್ತವೆ. ಅಂತೆಯೇ, ಕಾಲಕ್ಕೆ ತಕ್ಕಂತೆ ಕಾಯ್ದೆ-ಕಾನೂನುಗಳಲ್ಲಿ ಬದಲಾವಣೆ ತರುವುದೂ ಅಗತ್ಯವಾಗಿರುತ್ತದೆ. ಹಳೆಯ ಕಾನೂನುಗಳನ್ನು ಬದಲಿಸುವುದು ಅಥವಾ ಅವುಗಳಿಗೆ ತಿದ್ದುಪಡಿ ತಂದು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ನವೀಕರಿಸುವ ಅಗತ್ಯವಿರುತ್ತದೆ. ಇದೇ ಉದ್ದೇಶದಿಂದ 1986ರ ಕಾಯ್ದೆಗೆ ಬದಲಾಗಿ ನವೀಕರಿಸಿದ ಗ್ರಾಹಕರ ಸಂರಕ್ಷಣಾ ಅಧಿನಿಯಮವನ್ನು 2019ರ ಆ.9ರಂದು ಜಾರಿಗೆ ತರಲಾಯಿತು.

ಗ್ರಾಹಕರ ಜವಾಬ್ದಾರಿಗಳು

  1. ಖರೀದಿ ಸುವ ವಸ್ತು ಅಥವಾ ಪಡೆಯುವ ಸೇವೆಗಳ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಪ್ರತಿಯೊಂದು ವಸ್ತುಗಳಿಗೂ ರಸೀದಿ, ವಾರಂಟಿ ಕಾರ್ಡ್​ಗಳನ್ನು ಕೇಳಿ ಪಡೆದುಕೊಳ್ಳಬೇಕು. ಯಾವುದೇ ವಸ್ತು/ಸೇವೆಯ ಗುಣಮಟ್ಟದಲ್ಲಿ ದೋಷವಿದ್ದರೆ, ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಲು ರಸೀದಿ ಅತ್ಯಗತ್ಯ.
  2. ಖರೀದಿಸಿದ ಸರಕುಗಳ ಅಳತೆ ಸರಿಯಾಗಿದೆಯೇ, ಮಾಪಕಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸ ಬೇಕು. ತೂಕದ ಸಾಧನಗಳನ್ನು ಕಾನೂನು ಮಾಪನ ಇಲಾಖೆ ಪ್ರತಿ ವರ್ಷ ಪರಿಶೀಲನೆಗೆ ಒಳಪಡಿಸಿ, ಮುದ್ರೆ ಹಾಕಿ ಖಚಿತಪಡಿಸುತ್ತಾರೆ. ಈ ವಿಚಾರವನ್ನು ಗ್ರಾಹಕರು ತಿಳಿದುಕೊಂಡಿರಬೇಕು.
  3. ವಸ್ತುಗಳ ಮೇಲಿನ ಪ್ಯಾಕೆಟ್​ಗಳ ಮೇಲೆ ತಯಾರಕರ ಹೆಸರು, ವಿಳಾಸ, ನಿವ್ವಳ ತೂಕ, ಪ್ಯಾಕ್ ಮಾಡಿದ ದಿನಾಂಕ, ಅವಧಿ ಮುಗಿಯುವ ದಿನಾಂಕ, ಗರಿಷ್ಠ ಮಾರಾಟ ಬೆಲೆ ಮುದ್ರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸರಕಿನ ಗುಣಮಟ್ಟ ಖಾತ್ರಿಪಡಿಸುವ ಐಎಸ್​ಐ ಮಾರ್ಕ್ ಹೊಂದಿರುವ ಸರಕುಗಳನ್ನು ಕೊಳ್ಳುವುದು ಉತ್ತಮ.
  4. ಭಾರಿ ರಿಯಾಯಿತಿ, ಹೆಚ್ಚು ಆಮಿಷ ತೋರುವ ಸಂಸ್ಥೆಗಳೊಂದಿಗೆ ವ್ಯವಹರಿಸುವಾಗ ಗ್ರಾಹಕರು ಎಚ್ಚರದಿಂದಿರಬೇಕು. ಆನ್​ಲೈನ್ ಶಾಪಿಂಗ್, ಟೆಲಿ ಮಾರ್ಕೆಟಿಂಗ್ ಎಂಬ ಹೊಸ ಹೊಸ ಮಾರ್ಗಗಳ ಮೂಲಕವೂ ವ್ಯಾಪಾರ ನಡೆಯುತ್ತಿದ್ದು, ಗ್ರಾಹಕರು ಹೆಚ್ಚು ಕಾಳಜಿವಹಿಸಬೇಕು.

ಹಳೆಯ ಹಾಗೂ ಹೊಸ ಕಾನೂನಿನ ಪ್ರಮುಖ ವ್ಯತ್ಯಾಸಗಳು

ನಿಯಂತ್ರಣಾಧಿಕಾರ: 1986ರ ಕಾಯ್ದೆಗೆ ನಿಯಂತ್ರಣಾ ಸಂಸ್ಥೆಯಿರಲಿಲ್ಲ; 2019ರ ಕಾಯ್ದೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದನ್ವಯ ರಚಿತವಾಗಿವೆ.

ನ್ಯಾಯಾಲಯದ ವ್ಯಾಪ್ತಿ: 1986- ಗ್ರಾಹಕರು ವರ್ತಕರೊಡನೆ ಎಲ್ಲಿ ವ್ಯವಹಾರ ನಡೆಸಿರುತ್ತಾರೋ ಅಲ್ಲಿ, ಅಂದರೆ ವರ್ತಕನ ವ್ಯವಹಾರ ಸಂಸ್ಥೆ ಇರುವ ಸ್ಥಳದ ವ್ಯಾಪ್ತಿಗೆ ಬರುವ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿತ್ತು; 2019- ಗ್ರಾಹಕ ಎಲ್ಲಿ ವಾಸವಿರುತ್ತಾನೋ ಅಥವಾ ಎಲ್ಲಿ ಕೆಲಸ ಮಾಡುತ್ತಿರುತ್ತಾನೋ ಅಲ್ಲಿನ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಬಹುದು.

ಸರಕು, ಸೇವೆಗಳ ಬಗ್ಗೆ ಜವಾಬ್ದಾರಿ: 1986- ಯಾವುದೇ ಕಲಂಗಳಿರಲಿಲ್ಲ. ಜವಾಬ್ದಾರಿಯ ಬಗ್ಗೆ ಸಿವಿಲ್ ನ್ಯಾಯಾಲಯಗಳಲ್ಲಿ ದಾವೆ ಹೂಡಬೇಕಿತ್ತು. ಗ್ರಾಹಕ ನ್ಯಾಯಾಲಯದಲ್ಲಿ ಅವಕಾಶವಿರಲಿಲ್ಲ. 2109- ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

ಮೌಲಿಕ ವ್ಯಾಪ್ತಿ: 1986- ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ 20 ಲಕ್ಷ ರೂ.ವರೆಗಿನ ವ್ಯವಹಾರ, 20 ಲಕ್ಷದಿಂದ 1 ಕೋಟಿ ವರೆಗಿನ ವ್ಯವಹಾರಗಳ ಬಗ್ಗೆ ರಾಜ್ಯ ಗ್ರಾಹಕರ ನ್ಯಾಯಾಲಯ,1 ಕೋಟಿಗೂ ಅಧಿಕ ವ್ಯವಹಾರದ ಬಗೆಗಿನ ದೂರುಗಳನ್ನು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳಿಗೆ ನೀಡಬಹುದು; 2019- 1 ಕೋಟಿ ರೂ.ವರೆಗಿನ ವ್ಯವಹಾರದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ, 1 ಕೋಟಿಯಿಂದ 10 ಕೋಟಿ ವರೆಗಿನ ವ್ಯವಹಾರಗಳ ಸಂಬಂಧ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ, 10 ಕೋಟಿ ರೂ.ಗೂ ಮೇಲ್ಪಟ್ಟದ್ದನ್ನು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಗಳಲ್ಲಿ ದೂರು ದಾಖಲಿಸಬಹುದು.

ಅಂತರ್ಜಾಲ ವ್ಯವಹಾರ: 1986- ಇ-ಕಾಮರ್ಸ್​ಗೆ ಸಂಬಂಧಿ ಸಿದಂತೆ ಕಾಯ್ದೆಯಲ್ಲಿ ಯಾವುದೇ ಕಲಂಗಳಿರಲಿಲ್ಲ; 2019- ವಸ್ತುಗಳ ನೇರ ವ್ಯವಹಾರದ ನಿಯಮಗಳು ಇ-ಕಾಮರ್ಸ್ ವ್ಯಾಪ್ತಿಗೆ ಒಳಪಡುತ್ತವೆ.

ಮಧ್ಯಸ್ಥಿಕಾ ಕೇಂದ್ರಗಳು: 1986ರ ಕಾಯ್ದೆಯಲ್ಲಿ ಯಾವುದೇ ಅವಕಾಶವಿರಲಿಲ್ಲ. 2019ರ ಕಾಯ್ದೆಯಲ್ಲಿ ಗ್ರಾಹಕರ ನ್ಯಾಯಾಲಯವು ವ್ಯಾಜ್ಯ ತೀರ್ವನಿಸಲು ಪಕ್ಷಗಾರರನ್ನು ಮಧ್ಯ ಸ್ಥಿಕಾ ಕೇಂದ್ರಗಳಿಗೆ ಕಳುಹಿಸಬಹುದು.