ಏನಿದು ಲಕ್ಸುರಿ ಕ್ಯಾಂಡಲ್?: ಮೊಂಬತ್ತಿ ಬಳಕೆ ಎಲ್ಲರೂ ಮಾಡಿರುತ್ತಾರೆ. ಅದೇ ದೊಡ್ಡ ದೊಡ್ಡ ಹೋಟೆಲ್, ಧ್ಯಾನ ಕೇಂದ್ರ, ಸ್ಪಾಗಳಿಗೆಲ್ಲ ಭೇಟಿ ನೀಡಿದ ಸಂದರ್ಭ ಬಹಳ ಆಕರ್ಷಣೀಯವಾಗಿರುವ ಕ್ಯಾಂಡಲ್ಗಳು ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ, ಅದರಿಂದ ಹೊರಹೊಮ್ಮುವ ಪರಿಮಳ ಮನಸ್ಸನ್ನು ಹಗುರ ಮಾಡುತ್ತದೆ. ಹೀಗೆ ಬಹಳ ವಿಶೇಷವಾಗಿ ಕಾಣಿಸುವ ಈ ಕ್ಯಾಂಡಲ್ಗಳನ್ನು ಲಕ್ಸುರಿ ಕ್ಯಾಂಡಲ್ ಅಂತ ಕರೆಯುತ್ತಾರೆ. ವಿವಿಧ ಬಗೆಯ ವ್ಯಾಕ್ಸ್, ಫ್ರಾಗ್ರಾನ್ಸ್, ಕಾನ್ಸೆಪ್ಟ್, ಫೈನ್ಆರ್ಟ್, ಡಿಸೈನ್ ಈ ಕ್ಯಾಂಡಲ್ಗಳಲ್ಲಿ ಅಡಕವಾಗಿರುತ್ತದೆ. ಹೀಗಾಗಿ ಇದಕ್ಕೆ ದುಬಾರಿ ಬೆಲೆ ಮತ್ತು ಹೆಚ್ಚು ಬೇಡಿಕೆ.
ಕ್ಯಾಂಡಲ್ ಬಿಸಿನೆಸ್ಗೆ ಬಂಡವಾಳ: ಕ್ಯಾಂಡಲ್ ಬಿಸಿನೆಸ್ಗೆ ಹೆಚ್ಚು ಬಂಡವಾಳದ ಅವಶ್ಯಕತೆ ಬರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಶುರುಮಾಡಲು ಕೇವಲ 15ರಿಂದ 20 ಸಾವಿರ ರೂ. ಸಾಕಾಗುತ್ತದೆ. 50ರಿಂದ 60 ಸಾವಿರ ರೂ. ಹೂಡಿಕೆ ಶಕ್ತಿ ಇರುವವರು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸಬಹುದು. ಆರಂಭಿಕ ಬಂಡವಾಳದಲ್ಲಿ ಮೇಣಕ್ಕೆ, ಅಚ್ಚು, ಗ್ಯಾಸ್ ಹೊಂದಿಸಿಕೊಂಡರೆ ಇನ್ಯಾವ ಹೂಡಿಕೆ ಈ ಉದ್ದಿಮೆಯಲ್ಲಿ ಇರುವುದಿಲ್ಲ. ತದನಂತರ ಅಗತ್ಯಕ್ಕೆ ತಕ್ಕಂತೆ ಮೇಣಗಳನ್ನು, ದ್ರವ್ಯಗಳನ್ನು ಕೊಂಡುಕೊಂಡರೆ ಆಯಿತ್ತಷ್ಟೆ. ಇನ್ನು ವಿನ್ಯಾಸಕ್ಕೆ ತಕ್ಕಂತೆ ಬೇಕಾಗುವ ಕಚ್ಚಾ ವಸ್ತುಗಳು ಸ್ಥಳೀಯ ಮಾರುಕಟ್ಟೆಯಲ್ಲೇ ಲಭ್ಯವಿರುತ್ತದೆ. ಮೇಣಗಳಲ್ಲಿ ಜೇನಿನ ಮೇಣ ಸೇರಿ 7ಕ್ಕೂ ಹೆಚ್ಚು ಬಗೆಯವು ಬಳಕೆಯಲ್ಲಿವೆ. ಆರೋಗ್ಯಕ್ಕೆ ಹಾನಿಕಾರಕವಲ್ಲದ ಮೇಣವನ್ನು ಲಕ್ಸುರಿ ಕ್ಯಾಂಡಲ್ ತಯಾರಿಗೆ ಬಳಸುತ್ತಾರೆ.
ಕ್ಯಾಂಡಲ್ ಮಾರುಕಟ್ಟೆ: ಇವತ್ತಿನ ಕಾಲಘಟ್ಟದಲ್ಲಿ ದಿನಬಳಕೆ ಕ್ಯಾಂಡಲ್ಗಿದ್ದ ಮಾರುಕಟ್ಟೆ ಕಡಿಮೆ ಆಗಿದೆ. ಆದರೆ ಲಕ್ಸುರಿ ಕ್ಯಾಂಡಲ್ ಉದ್ದಿಮೆ ಮಾತ್ರ ದಿನೇದಿನೆ ಬೆಳೆಯುತ್ತಿದೆ. 2020ರ ಗ್ಲೋಬಲ್ ಮಾರ್ಕೆಟ್ ಸರ್ವೆ ಪ್ರಕಾರ, ಕ್ಯಾಂಡಲ್ ಬಿಸಿನೆಸ್ನ ಮಾರುಕಟ್ಟೆ ಮೌಲ್ಯ ಸುಮಾರು 2,601 ಕೋಟಿ ರೂ. ಭಾರತದಲ್ಲಿ ಕ್ಯಾಂಡಲ್ ಬಿಸಿನೆಸ್ ವಾರ್ಷಿಕ ಶೇ.20ರ ಪ್ರಗತಿ ಸಾಧಿಸುತ್ತಿದೆ. ಉತ್ತಮ ಫ್ರಾಗ್ರಾನ್ಸ್ ಮತ್ತು ಡಿಸೈನ್ ನೀಡಿದರೆ ದೇಶ ವಿದೇಶಗಳಿಂದಲೂ ಬೇಡಿಕೆ ಬರುತ್ತದೆ. ಸ್ಪಾ, ರೆಸಾರ್ಟ್, ಧ್ಯಾನ ಕೇಂದ್ರ, ಈವೆಂಟ್ ಮ್ಯಾನೆಜ್ವೆುಂಟ್, ಸಂಸ್ಥೆಗಳು ಕ್ಯಾಂಡಲ್ ಉದ್ದಿಮೆಯ ದೊಡ್ಡ ಪ್ರಮಾಣದ ಗ್ರಾಹಕರು. ಅಲಂಕಾರಿಕ ಪ್ರಿಯರು ಎರಡನೇ ಸಾಲಿನಲ್ಲಿರುತ್ತಾರೆ. ಬೇರೆ ಉದ್ಯಮದ ರೀತಿ ಸಿದ್ಧಪಡಿಸಿಕೊಂಡ ನಂತರ ಗ್ರಾಹಕರ ಹುಡುಕಾಟ ಈ ಉದ್ದಿಮೆಗೆ ಬೇಕಿಲ್ಲ. ಬದಲಿಗೆ ಆರ್ಡರ್ ಪಡೆದು ಕ್ಯಾಂಡಲ್ ತಯಾರಿಸಿ ಕೊಟ್ಟರೆ ಆಯ್ತು. ತಿಂಗಳಿಗೆ 3ರಿಂದ 4 ದಿನಗಳ ಕಾಲವಷ್ಟೇ ಪ್ರೊಡಕ್ಷನ್ ಮಾಡಿದರೆ ಸಾಕು, ಮಿಕ್ಕ ದಿನಗಳಲ್ಲಿ ಸಪ್ಲೈ ಮತ್ತು ಆರ್ಡರ್ ಪಡೆಯುವುದಷ್ಟೇ ಕೆಲಸ ಈ ಉದ್ದಿಮೆಯಲ್ಲಿರುತ್ತದೆ. ಒಂದು ವೇಳೆ ಪೊ›ಡಕ್ಷನ್ ಸಮಯದಲ್ಲಿ ಅಚ್ಚು ಸರಿ ಬರಲಿಲ್ಲ ಅಂದರೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಮತ್ತೆ ಮೇಣವನ್ನು ಕುದಿಸಿ ಮರುಬಳಕೆ ಮಾಡಬಹುದು.
ಲಕ್ಸುರಿ ಕ್ಯಾಂಡಲ್ನ ವಿಧಗಳು: ಧ್ಯಾನಕ್ಕೆ, ನಿದ್ರೆಗೆ, ಪ್ರೇರಣೆಗೆ, ಆರೋಗ್ಯಕ್ಕೆ, ಮಕ್ಕಳಿಗೆ, ಅಲಂಕಾರಕ್ಕೆ, ಆಕರ್ಷಣೆಗೆ, ಒತ್ತಡ ನಿವಾರಣೆ ಸೇರಿ ನೂರೆಂಟು ಕಾರಣಕ್ಕೆ ಕ್ಯಾಂಡಲ್ ಸಿದ್ಧವಾಗುತ್ತಿವೆ. ಅವುಗಳಲ್ಲಿ ಕೆಲ ಕ್ಯಾಂಡಲ್ಗಳ ಪರಿಚಯ ಇಲ್ಲಿದೆ.
ಹಬ್ಬಕ್ಕೆ: ಹಬ್ಬದ ಸಂಭ್ರಮಕ್ಕೆ ಹೇಗೆ ಹೂವು, ಮಾವುಗಳ ಶೃಂಗಾರ ಮಾಡಿ ಪಾಸಿಟಿವ್ ಶಕ್ತಿ ರೂಪಿಸಿಕೊಳ್ಳುತ್ತೇವೆಯೋ ಅದೇ ಮಾದರಿಯಲ್ಲಿ ಹಬ್ಬದ ಕ್ಯಾಂಡಲ್ ಆಕರ್ಷಣೆ ಪಡೆದುಕೊಂಡಿರುತ್ತದೆ.
ಗೋಡೆ ಅಲಂಕಾರಕ್ಕೆ: ಗೋಡೆಗೆ ಅಲಂಕಾರಿಕವಾಗಿ ಬಳಸುವ ಕ್ಯಾಂಡಲ್ ಕೂಡ ಇದೆ. ಆ ಮಾದರಿ ಕ್ಯಾಂಡಲ್ ಮನೆಯವರನ್ನು ಪಾಸಿಟಿವ್ ಲೋಕಕ್ಕೆ ಕರೆದೊಯ್ಯುತ್ತದೆ.
ಕಾಫಿ ಫ್ಲೇವರ್ ಕ್ಯಾಂಡಲ್: ಕ್ಯಾಂಡಲ್ನಲ್ಲಿ ಕಾಫಿ ಪುಡಿ ಬಳಕೆ ಮೂಲಕ ಸ್ವಾದ ಸೃಷ್ಟಿಸೋ ವಿನ್ಯಾಸವೇ ಈ ಕಾಫಿ ಕ್ಯಾಂಡಲ್. ಕಾಫಿ ಅಡಿಕ್ಷನ್ ಹೆಚ್ಚಿರುವ ವ್ಯಕ್ತಿಗಳಿಗೆ ಅಡಿಕ್ಷನ್ವುುಕ್ತ ಜೀವನವನ್ನು ಈ ಕ್ಯಾಂಡಲ್ ನೀಡಬಲ್ಲದು.
ಕ್ಯಾಂಡಲ್ ಬಿಜಿನೆಸ್ನಲ್ಲಿ ಆದಾಯ: ಕ್ಯಾಂಡಲ್ ಬಿಸಿನೆಸ್ನಲ್ಲಿ ಶೇ.70ರಿಂದ ಶೇ.80 ಲಾಭ ಇದೆ. ಒಂದು ರೂಂನಷ್ಟು ಸಣ್ಣ ಜಾಗದಲ್ಲಿಯೇ ಈ ಉದ್ದಿಮೆ ಶುರು ಮಾಡಿದರೆ ವರ್ಷಕ್ಕೆ ಏನಿಲ್ಲವೆಂದರೂ, 8ರಿಂದ 10 ಲಕ್ಷ ರೂ. ಆದಾಯ ಪಡೆದುಕೊಳ್ಳಬಹುದು. ಮಾರುಕಟ್ಟೆ ವೃದ್ಧಿಸಿಕೊಳ್ಳುತ್ತ ಹೋದಂತೆ ಆ 8 ಲಕ್ಷ ರೂ. 20ರಿಂದ 25 ಲಕ್ಷ ರೂ.ಗೆ ತಲುಪಬಹುದು.