ನ್ಯೂಸ್

ಆರೋಗ್ಯಕರ ಅರ್ಥವ್ಯವಸ್ಥೆ: ಆರ್ಥಿಕ ಸಮೀಕ್ಷೆ 2021-22 ಮಂಡನೆ

ಮುಂದಿನ ವರ್ಷದ ಕೇಂದ್ರ ಮುಂಗಡಪತ್ರ ಮಂಡನೆಗೆ ಮುಂಚಿತವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದರು. ದೇಶದ ಜಿಡಿಪಿ ಮುನ್ನೋಟ ಸೇರಿ ಒಟ್ಟಾರೆ ಅರ್ಥವ್ಯವಸ್ಥೆ ರಿಪೋರ್ಟ್ ಕಾರ್ಡ್ ಹೀಗಿದೆ.

ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಿರುವ ಆರ್ಥಿಕ ಸಮೀಕ್ಷೆ 2021-2ರಲ್ಲಿ ಹಲವು ವಿಚಾರಗಳು ಗಮನಸೆಳೆದಿವೆ. ವಿಶೇಷವಾಗಿ, ದೇಶದ ಅರ್ಥವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀರುವಂಥ ಕಚ್ಚಾತೈಲದರ ಪ್ರಸ್ತುತ ಪ್ರತಿಬ್ಯಾರೆಲ್​ಗೆ 90 ಡಾಲರ್ ಇದ್ದು, ಮುನ್ನೋಟದ ಬೆಲೆ 70ರಿಂದ 75 ಡಾಲರ್ ನಮೂದಾಗಿದೆ. ಅದೇ ರೀತಿ, ಎಲ್ಲ ಕ್ಷೇತ್ರಗಳಲ್ಲಿ ಖಾಸಗಿ ಪಾಲುದಾರಿಕೆಗೆ ಉತ್ತೇಜನ ನೀಡುವ ಕೆಲಸ ಮುಂದುರಿದಿದೆ. ಏರ್ ಇಂಡಿಯಾ ಖಾಸಗೀಕರಣವು ಈ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಿದೆ. ಜಗತ್ತಿನ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ವಿದೇಶ ವಿನಿಮಯ ಮೀಸಲು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ. ಸಗಟು ಮಾರಾಟದರದ ಸೂಚ್ಯಂಕ ಆಧಾರಿತ ಹಣದುಬ್ಬರ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದು, ಇದಕ್ಕೆ ಸದ್ಯದ ಕರೊನಾ ಸಾಂಕ್ರಾಮಿಕ ಮತ್ತು ಜಾಗತಿಕ ಇಂಧನ ದರಗಳು ಕಾರಣ.

ಆರೋಗ್ಯ: ದೇಶದ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ವೆಚ್ಚ ಪ್ರಮಾಣ 2019-20ರಲ್ಲಿ 2.73 ಲಕ್ಷ ಕೋಟಿ ರೂ.ಇದ್ದದ್ದು, ಪ್ರಸಕ್ತ ವರ್ಷಕ್ಕೆ 4.72 ಲಕ್ಷ ಕೋಟಿ ರೂ. ಅಂದಾಜಿಸಲಾಗಿದೆ. ಅಂದರೆ ಶೇ. 73 ಏರಿಕೆ ದಾಖಲಾಗಿದೆ.

ಇಂಧನ: ಪೆಟ್ರೋಲ್​ಗೆ ಎಥನಾಲ್ ಮಿಶ್ರಣ ಪ್ರಸಕ್ತ ವರ್ಷ ಶೇ. 10 ನಿರೀಕ್ಷಿಸಲಾಗುತ್ತಿದ್ದು, 2025ರ ವೇಳೆಗೆ ಇದನ್ನು ಶೇ.20ಕ್ಕೇರಿಸಲು ಉಪಕ್ರಮ; ವಿಕೇಂದ್ರೀಕೃತ ಇಂಧನ ಬಳಕೆಗೆ ಉತ್ತೇಜನ ನೀಡುವ ಮೂಲಕ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು; ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ಹಂತ ಹಂತವಾಗಿ ಕಡಿಮೆ ಮಾಡಿ ನವೀಕರಿಸಬಹುದಾದ ಇತರ ಇಂಧನ ಶಕ್ತಿಗಳ ಬಳಕೆಗೆ ಉತ್ತೇಜನ.

ಸಾಮಾಜಿಕ ಸೇವಾಕ್ಷೇತ್ರ: 2021-22ರ ಬಜೆಟ್ ಅಂದಾಜಿನ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸರಾಸರಿ 71.61 ಲಕ್ಷ ಕೋಟಿ ರೂ. (ಶೇಕಡ 9.8 ಹೆಚ್ಚಳ) ವೆಚ್ಚ ಅಂದಾಜಿಸಿವೆ. 2020-21ರಲ್ಲಿ ಪರಿಷ್ಕೃತ ಅಂದಾಜಿನ ಪ್ರಕಾರ 65.24 ಲಕ್ಷ ಕೋಟಿ ರೂ. ಆಗಿತ್ತು.

ಕೃಷಿ

  1. ಕೃಷಿಯ ಪೂರಕ ಕ್ಷೇತ್ರಗಳು, ರಸಗೊಬ್ಬರಗಳಿಗೆ ಪರ್ಯಾಯ, ಬೆಳೆ ವಿಕೇಂದ್ರೀಕರಣದ ಕಡೆಗೆ ಗಮನಹರಿಸಬೇಕಾದ ಅವಶ್ಯಕತೆ.
  2. ಸಂಕಷ್ಟದ ನಡುವೆಯೂ ಪೂರಕ ಕ್ಷೇತ್ರಗಳ ಬೆಳವಣಿಗೆಯೊಂದಿಗೆ ಕೃಷಿ ಕ್ಷೇತ್ರದ ಬೆಳವಣಿಗೆ ಪ್ರಸಕ್ತ ವರ್ಷ ಶೇ. 3.9 ದಾಖಲಾಗುವ ನಿರೀಕ್ಷೆ.
  3. ಕೃಷಿಸಾಲ ಪ್ರಮಾಣ ಪ್ರಸಕ್ತ ವರ್ಷ ಮೊದಲ ಆರು ತಿಂಗಳಲ್ಲಿ 7.36 ಲಕ್ಷ ಕೋಟಿ ರೂ. ವಿತರಣೆ. ಸರ್ಕಾರದ ಗುರಿ 16.50 ಲಕ್ಷ ಕೋಟಿ ರೂ.
  4. ಬ್ಯಾಂಕುಗಳ ಮೂಲಕ ಜ.17ರ ತನಕ 2.70 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್​ಗಳ ವಿತರಣೆ.
  5. ರಸಗೊಬ್ಬರ ಸಬ್ಸಿಡಿ ಪ್ರಸಕ್ತ ವರ್ಷ ಮೊದಲ 9 ತಿಂಗಳ ಅವಧಿಯಲ್ಲಿ 85,300 ಕೋಟಿ ರೂ. ವಿತರಣೆ ಆಗಿದೆ. ಕಳೆದ ವರ್ಷ 1,38,500 ಕೋಟಿ ರೂ. ವಿತರಣೆ ಆಗಿತ್ತು.

ಶಿಕ್ಷಣ

  • ದೇಶದ ಶೈಕ್ಷಣಿಕ ವೆಚ್ಚ ಪ್ರಮಾಣ ಶೇಕಡ 20 ಏರಿಕೆಯಾಗಿದ್ದು, 6.97 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿದೆ.
  • ಸ್ಕೂಲ್ ಡ್ರಾಪ್ ಔಟ್ ದರ 2019-20ರಲ್ಲಿ ಪ್ರಾಥಮಿಕ ಹಂತದಲ್ಲಿ ಶೇಕಡ 4.45 (2018-19) ರಿಂದ ಶೇಕಡ 1.45ಕ್ಕೆ ಇಳಿದಿದೆ.
  • ಪ್ರಾಥಮಿಕ, ಸೆಕೆಂಡರಿ, ಉನ್ನತ ಶಿಕ್ಷಣ ಸೇರಿ ಎಲ್ಲ ಮಟ್ಟದಲ್ಲಿಯೂ ಒಟ್ಟು ನೋಂದಣಿ ಅನುಪಾತದಲ್ಲಿ ಸುಧಾರಣೆ ದಾಖಲು. ಉನ್ನತ ಶಿಕ್ಷಣ ವಿಭಾಗದಲ್ಲಿ ಜಿಇಆರ್ 2018-19ರಲ್ಲಿ 26.3% ಇದ್ದದ್ದು ಈಗ 27.1 %ಗೆ ಏರಿಕೆಯಾಗಿದೆ.
  • ಗ್ರಾಮೀಣ ಭಾಗದಲ್ಲಿ 2018ರಲ್ಲಿ ಶಿಕ್ಷಣ ಕೈಬಿಟ್ಟವರ ಪ್ರಮಾಣ ಶೇ.12.1 ಇದ್ದದ್ದು 2021ರಲ್ಲಿ ಶೇ.6.6ಕ್ಕೆ ಕುಸಿದಿದೆ.

ಮಾಹಿತಿ ತಂತ್ರಜ್ಞಾನ

ಐಟಿ ಬಿಪಿಎಂ ಸೆಕ್ಟರ್​ನ ಆದಾಯ ಇದುವರೆಗೆ (ಇ-ಕಾಮರ್ಸ್ ಹೊರತುಪಡಿಸಿ 194 ಶತಕೋಟಿ ಡಾಲರ್ ಆಗಿದೆ. ವರ್ಷದಿಂದ ವರ್ಷಕ್ಕೆ ಶೇ. 2.26 ಪ್ರಗತಿ ದಾಖಲಾಗಿದೆ.

ವಿಮಾನಯಾನ: ಕೋವಿಡ್-19 ಸಂಕಷ್ಟದ ಹೊಡೆತದ ಬಳಿಕ ವಿಮಾನಯಾನ ಕ್ಷೇತ್ರ ಪುನಶ್ಚೇತನ ಪಡೆಯುವ ಹಾದಿಯಲ್ಲಿದೆ. ಉಡಾನ್ ಮತ್ತು ಇತರ ಪೂರಕ ಯೋಜನೆಗಳ ಮೂಲಕ ವಿಮಾನಯಾನ ಕ್ಷೇತ್ರ ಬಲಪಡಿಸುವ ಕೆಲಸ ಶುರುವಾಗಿದೆ.

ರಸ್ತೆನಿರ್ವಣ: 2020-21ರಲ್ಲಿ 13,327 ಕಿ.ಮೀ. ರಸ್ತೆ ನಿರ್ಮಾಣ ಪೂರ್ಣಗೊಂಡಿದೆ. 2019-20ರಲ್ಲಿ 10,237 ಕಿ.ಮೀ. ರಸ್ತೆ ನಿರ್ವಣವಾಗಿತ್ತು. 2021-22ರಲ್ಲಿ ಸೆಪ್ಟೆಂಬರ್ ತನಕ 3,824 ಕಿ.ಮೀ. ರಸ್ತೆ ನಿರ್ವಣವಾಗಿದೆ.

ಉತ್ಪಾದನಾ ಕ್ಷೇತ್ರ

ಸೆಮಿಕಂಡಕ್ಟರ್ ಚಿಪ್​ನ ಕೊರತೆ ಕಾರಣ ಉತ್ಪಾದನೆ ಕುಂಠಿತ. ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ಉತ್ಪಾದನಾ ವಲಯದ ಚೇತರಿಕೆಗೆ 76,000 ಕೋಟಿ ರೂ. ಉಪಕ್ರಮ ಚೇತೋಹಾರಿ.

ಕ್ಷೇತ್ರದಲ್ಲಿ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ 1.7 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ 1.35 ಲಕ್ಷ ಹೊಸ ಉದ್ಯೋಗ ಸೃಜನೆ; 2026ಕ್ಕೆ ಪ್ರಾದೇಶಿಕ ಇಲೆಕ್ಟ್ರಾನಿಕ್ ಉತ್ಪಾದನೆ ಕ್ಷೇತ್ರದ ಮೌಲ್ಯ 22 ಲಕ್ಷ ಕೋಟಿ ರೂ. ಅಂದಾಜು; ಸೆಮಿಕಂಡಕ್ಟರ್ ಕೊರತೆ ಕಾರಣ ವಾಹನ ಉತ್ಪಾದನೆ ಕುಂಠಿತವಾಗಿದ್ದು 7 ಲಕ್ಷಕ್ಕೂ ಹೆಚ್ಚು ವಾಹನ ಪೂರೈಕೆ ಬಾಕಿ ಇದೆ.