ನ್ಯೂಸ್

ಅನಂತಕುಮಾರ್: ರಾಜಕೀಯ ನಾಯಕತ್ವ ಬೆಳೆಸಿದ ವಿಶಿಷ್ಟ ವ್ಯಕ್ತಿತ್ವ

Webdesk - Ravikanth
ಇಂದು (ಬುಧವಾರ) ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ 62ನೇ ಹುಟ್ಟುಹಬ್ಬ. ಅಧಿಕಾರದಲ್ಲಿದ್ದಾಗ ಅವರು ಸಾಧಿಸಿದ ಸಾಧನೆಗಳು, ಮೈಲಿಗಲ್ಲುಗಳು ಹಲವು. ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದ ಅವರು ಸಂಘಟನೆಗಾಗಿ ಮಾಡಿದ ಕೆಲಸ, ಕರ್ತವ್ಯದ ಬಗೆಗಿನ ಬದ್ಧತೆಯೂ ಅನನ್ಯ.

ಪಕ್ಷದ ಕಾರ್ಯಕರ್ತರನ್ನು ಸಂಘಟನಾತ್ಮಕವಾಗಿ ಬೆಳೆಸುವುದರ ಜತೆಗೆ ರಾಜಕೀಯ ನಾಯಕತ್ವವನ್ನು ಗುರುತಿಸಿ ಪ್ರೋತ್ಸಾಹಿಸುವುದು ಅನಂತಕುಮಾರ್ ಅವರ ಬಹಳ ಮುಖ್ಯವಾದ ಗುಣ. ಇವತ್ತು ಸೋಶಿಯಲ್ ಇಂಜಿನಿಯರಿಂಗ್ ಬಗ್ಗೆ ನಾವೇನು ಮಾತನಾಡುತ್ತಿದ್ದೆವೋ ಆ ತತ್ತ್ವವನ್ನು ಪಕ್ಷದಲ್ಲಿ ಬಹಳ ಹಿಂದೆಯೇ ಜಾರಿಗೆ ತಂದರು. ಅದರ ಪರಿಣಾಮವನ್ನು ನಾವು ಕಾಣಬಹುದಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬೀದರ್​ನ ರಘುನಾಥರಾವ್ ಮಲ್ಕಾಪುರೆ, ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಎ.ರಾಮದಾಸ್, ಸಚಿವ ಆರ್.ಅಶೋಕ್ ಹೀಗೆ ಅನೇಕರನ್ನು ಪಟ್ಟಿ ಮಾಡಬಹುದು. ಈ ರೀತಿ ಗುರುತಿಸುವಾಗ ಸಾಮಾಜಿಕ ನ್ಯಾಯಕ್ಕೂ ಒತ್ತು ನೀಡುತ್ತಿದ್ದರು. ಅದರ ಫಲವೇ ಕೆ.ಬಿ. ಶಾಣಪ್ಪ ರಾಜ್ಯಸಭಾ ಸದಸ್ಯರಾಗಿದ್ದು. ಅದಕ್ಕಾಗಿ ಅನೇಕರ ವಿರೋಧವನ್ನು ಅನಂತಕುಮಾರ್ ಕಟ್ಟಿಕೊಳ್ಳಬೇಕಾಯಿತು. ಅನಂತಕುಮಾರ್ ನಂತರ ಪಕ್ಷದಲ್ಲಿ ರಾಜಕೀಯ ನಾಯಕತ್ವವನ್ನು ಗುರುತಿಸಿ ಬೆಳೆಸುವ ದೊಡ್ಡ ಗ್ಯಾಪ್ ಉಂಟಾಗಿದೆ.

ಕನ್ನಡದ ಬಗ್ಗೆ ಗೌರವ: ಒಮ್ಮೆ ಲಂಕೇಶ್ ಪತ್ರಿಕೆಯಲ್ಲಿ ಮಹಾರಾಷ್ಟ್ರದ ಒಬ್ಬ ಸ್ವಾಮೀಜಿ ಬಗ್ಗೆ ಲೇಖನ ಪ್ರಕಟವಾಗಿತ್ತು. ಸ್ವಾಮೀಜಿ ಮೊಕದ್ದಮೆ ದಾಖಲಿಸಿದರು. ಮಹಾರಾಷ್ಟ್ರ ಪೊಲೀಸರು ಬಂಧನ ವಾರೆಂಟ್ ಜತೆ ಲಂಕೇಶರನ್ನು ಬಂಧಿಸಲು ಬಂದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಗೋಪಿನಾಥ ಮುಂಡೆ ಗೃಹ ಸಚಿವರಾಗಿದ್ದರು. ಲಂಕೇಶ್ ಪತ್ರಿಕೆಯ ಸ್ನೇಹಿತರೊಬ್ಬರು ನನ್ನನ್ನು ಸಂರ್ಪಸಿದರು. ನಾನು ತಕ್ಷಣ ಅನಂತಕುಮಾರ್ ಅವರನ್ನು ಸಂರ್ಪಸಿದೆ. ಅನಂತಕುಮಾರ್ ವಿರುದ್ಧ ಸಾಕಷ್ಟು ಬಾರಿ ಲಂಕೇಶ್ ಪತ್ರಿಕೆ ಟೀಕೆ ಮಾಡಿ ಬರೆದಿತ್ತು. ಆದರೆ ಕನ್ನಡದ ಸಾಹಿತಿ ಹಾಗೂ ಪತ್ರಕರ್ತರೊಬ್ಬರನ್ನು ಬಂಧಿಸುವುದು ಕನ್ನಡದ ನೆಲಕ್ಕೆ ಆಗುವ ಅಗೌರವ ಎಂದೇ ಭಾವಿಸಿದ ಅನಂತಕುಮಾರ್ ಅವರು ಗೋಪಿನಾಥ ಮುಂಡೆ ಅವರೊಂದಿಗೆ ಮಾತನಾಡಿ ಬಂಧಿಸದಂತೆ ನೋಡಿಕೊಂಡರು. ‘ಮುಂದಿನ ಸಂಚಿಕೆಯಲ್ಲಿಯೇ ಬೇಕಾದರೆ ನನ್ನ ಬಗ್ಗೆ ಬರೆಯಲಿ’ ಎಂದೇ ಆ ಸಂದರ್ಭದಲ್ಲಿ ಅನಂತಕುಮಾರ್ ಹೇಳಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿಯೇ ಭಾಷಣ ಮಾಡಿ ಭಾಷೆಯ ಹಿರಿಮೆ ಎತ್ತಿ ಹಿಡಿದರು.

ದೇವರು, ತಂದೆ-ತಾಯಿ: ಅನಂತಕುಮಾರ್ ಜೀವನದುದ್ದಕ್ಕೂ ದೇವರು, ತಂದೆ-ತಾಯಿ ಹಾಗೂ ಸಂಘಟನೆ ಬಗ್ಗೆ ಗೌರವ ಹೊಂದಿದ್ದರು. ವ್ಯಕ್ತಿಗತವಾಗಿ ಅವರು ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಅವರನ್ನು, ಸಂಘದಲ್ಲಿ ಯಾದವರಾವ್ ಜೋಶಿ, ಹೊ.ವೆ. ಶೇಷಾದ್ರಿ, ನ.ಕೃಷ್ಣಪ್ಪ, ಮೈ.ಚ. ಜಯದೇವ, ಎಬಿವಿಪಿಯಲ್ಲಿ ಕೃಷ್ಣಭಟ್, ದತ್ತಾತ್ರೇಯ ಹೊಸಬಾಳೆ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಯಡಿಯೂರಪ್ಪ ಅವರ ಬಗ್ಗೆ ಸಾಕಷ್ಟು ಗೌರವ ಹೊಂದಿದ್ದರು. ಎಂ.ಪಿ.ಕುಮಾರ್ ಅವರ ಆತ್ಮೀಯ ಸ್ನೇಹಿತ. ಪ್ರತಿನಿತ್ಯ ಮನೆ ಬಿಡುವ ಮುನ್ನ ಭಗವದ್ಗೀತೆಯನ್ನು ವಾಚಿಸುವುದು ಅವರ ರೂಢಿಯಾಗಿತ್ತು.

ಪಕ್ಷ ಸಂಘಟನೆ: ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ್ ಜೋಡೆತ್ತುಗಳ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದರು. ಯಡಿಯೂರಪ್ಪ ಹೋರಾಟಗಾರ, ಅವರ ಹೋರಾಟಕ್ಕೆ ಅನಂತಕುಮಾರ್ ಅವರು ಯೋಜಿತ ಸ್ವರೂಪ ನೀಡುತ್ತಿದ್ದರು. ಅದಕ್ಕೆ ಅನೇಕರನ್ನು ಜೋಡಿಸುತ್ತಿದ್ದರು. ಇಬ್ಬರು ಎಷ್ಟು ಕಷ್ಟಪಟ್ಟು ಸಂಘಟನೆ ಮಾಡಿದ್ದಾರೆ ಎಂಬುದಕ್ಕೆ ಸಣ್ಣ ಉದಾಹರಣೆ- ಒಮ್ಮೆ ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿ ನಾನು ಸ್ಕೂಟರ್​ನಲ್ಲಿ ಹೋಗುತ್ತಿದ್ದಾಗ ಇಬ್ಬರೂ ತಮ್ಮ ಸ್ಕೂಟರ್ ನಿಲ್ಲಿಸಿಕೊಂಡು ನಿಂತಿದ್ದರು. ಕಾರಣ ಕೇಳಿದಾಗ ‘ಪಕ್ಷದ ಖಜಾಂಚಿ ಶಂಕರನಾಯಕ್ ಮನೆಗೆ ಹೋಗಬೇಕು, ಸ್ಕೂಟರ್​ನಲ್ಲಿ ಪೆಟ್ರೋಲ್ ಖಾಲಿಯಾಗಿದೆ’ ಎಂದರು. ತಕ್ಷಣ ನನ್ನ ಸ್ಕೂಟರ್​ನಲ್ಲಿ ಇಬ್ಬರನ್ನು ಕೂಡಿಸಿಕೊಂಡು ಶಂಕರನಾಯಕ್ ಮನೆಗೆ ಬಿಟ್ಟು, ಕ್ಯಾನ್ ತಂದು ಅವರ ಸ್ಕೂಟರ್​ಗೆ ಪೆಟ್ರೋಲ್ ಹಾಕಿಸಿ ತಗೊಂಡು ಹೋಗಿ ಬಿಟ್ಟೆವು. ಈ ರೀತಿ ಪಕ್ಷ ಸಂಘಟನೆ ಮಾಡಿದರು.

ಘೋಷಣೆ ರೂಪಿಸುವ ನಿಪುಣ: ಚುನಾವಣೆಗೆ ಪಕ್ಷ ಸಂಘಟನೆಯೇ ಇರಲಿ, ಸರ್ಕಾರದ ಯೋಜನೆಗಳಿಗೆ ಇರಲಿ ಘೋಷಣೆಗಳನ್ನು ರೂಪಿಸುವುದರಲ್ಲಿ ಅನಂತಕುಮಾರ್ ಅವರನ್ನು ಮೀರಿಸುವ ಇನ್ನೊಬ್ಬರಿಲ್ಲ. 2004ರ ಚುನಾವಣೆಗೆ ‘ನೀರು ನೀಡದ ಸರ್ಕಾರ ಬದಲಿಸುವುದೇ ಪರಿಹಾರ, ಸೂರು ನೀಡದ ಸರ್ಕಾರ ಬದಲಿಸುವುದೇ ಪರಿಹಾರ’- ಹೀಗೆ ಹಲವು ಸ್ಲೋಗನ್ ರೂಪಿಸಿದೆವು. ಇನ್ನೊಂದು ಚುನಾವಣೆಯಲ್ಲಿ, ‘ಭಾರತಕ್ಕೆ ವಾಜಪೇಯಿ, ಕರ್ನಾಟಕಕ್ಕೆ ಬಿಜೆಪಿ’, ‘ಬಿಜೆಪಿಯೇ ಪರಿಹಾರ’, ಕೇಂದ್ರ ಸರ್ಕಾರದ ಸುವರ್ಣ ಚತುಷ್ಪಥ ರಸ್ತೆ ಹೀಗೆ ಅನೇಕ ಘೋಷವಾಕ್ಯಗಳು ಅನಂತಕುಮಾರ್ ರೂಪಿಸಿದರು.

ಸರಳತೆ: ಒಮ್ಮ ಹರಿದ್ವಾರದ ರೈಲ್ವೆ ಫ್ಲಾಟ್​ಫಾರಂನಲ್ಲಿ ಮಲಗಿದ್ದೇವು. ಆಗ ಅನಂತಕುಮಾರ್ ಅವರು ಹೇಳಿದ್ದು, ‘ಎಂಎಚ್ ನಾನು ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಜತೆ ಅಮೆರಿಕದ ದುಬಾರಿ ಹೋಟೆಲ್​ನಲ್ಲಿದ್ದೆ, ಈಗ ಫ್ಲಾಟ್​ಫಾರಂನಲ್ಲಿದ್ದೇನೆ, ಮಲಗಲು ನನಗೆ ಯಾವ ಸ್ಥಳವು ವ್ಯತ್ಯಾಸ ಎನ್ನಿಸುತ್ತಿಲ್ಲ’ ಎಂದು. ಅವರ ಸರಳತೆಗೆ ಇದು ಸಾಕ್ಷಿ.

ಹಲವು ಕ್ಷೇತ್ರದಲ್ಲಿ ಆಸಕ್ತಿ: ಅವರಿಗೆ ರಾಜಕೀಯ ಮಾತ್ರವಲ್ಲ ಸಾಹಿತ್ಯ, ಸಿನಿಮಾ, ಕ್ರಿಕೆಟ್ ಹೀಗೆ ಎಲ್ಲ ಕ್ಷೇತ್ರಗಳ ಬಗ್ಗೆಯೂ ಆಸಕ್ತಿ ಇತ್ತು. ಸಿನಿಮಾ ನೋಡಿದರೆ ನಿರ್ದೇಶಕರ ಜತೆ ಚರ್ಚೆ ನಡೆಸಿದ ಉದಾಹರಣೆ ಇದೆ. ಸಾಹಿತಿಗಳ ಜತೆಗೂ ಒಡನಾಟ ಹೊಂದಿದ್ದರು. ‘ಅಮೆರಿಕ ಅಮೆರಿಕ’ ಸಿನಿಮಾ ನೋಡಿ ಅದರ ನಿರ್ದೇಶಕರ ಜತೆ ಅಮೆರಿಕ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಿದ್ದಕ್ಕೆ ನಾನೇ ಸಾಕ್ಷಿ.

ಚುಟುಕು ಕವಿ: ಅನಂತಕುಮಾರ್ ಚುಟುಕು ಕವಿ ಸಹ, ಅವರು ಪತ್ರ ಬರೆಯುವಾಗ ಕೊನೆಯಲ್ಲಿ ಚುಟುಕು ಕವನವನ್ನು ‘ಹೋತಾನಂದ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಅವರ ಮದುವೆ ಆಹ್ವಾನ ಪತ್ರಿಕೆ ಹಂಚಲು ಸ್ಕೂಟರ್​ನಲ್ಲಿ ದಿನಗಟ್ಟಲೇ ಓಡಾಡುತ್ತ, ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದಿದೆ.

ಹೆಸರು ಬದಲಿಸಲಿಲ್ಲ: ಅನಂತಕುಮಾರ್ ಕೇಂದ್ರದಲ್ಲಿ ಸಂಸ್ಕೃತಿ ಸಚಿವರಾಗಿದ್ದಾಗ ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್​ನಲ್ಲಿ ಸೋನಿಯಾ ಗಾಂಧಿ ಸೇರಿ ಅನೇಕ ರಾಜಕಾರಣಿಗಳು ಆಜೀವ ಸದಸ್ಯರಾಗಿದ್ದರು. ಅವರೆಲ್ಲರನ್ನು ತೆಗೆದು ಹಾಕಿ ಕಲೆ, ಸಂಸ್ಕೃತಿ, ಸಾಹಿತ್ಯದ ಗಣ್ಯರನ್ನು ನೇಮಿಸಿದರೆ ಹೊರತು ಕೇಂದ್ರದ ಹೆಸರು ಬದಲಿಸಲು ಹೋಗಲಿಲ್ಲ. ಅದು ಅವರ ದೊಡ್ಡಗುಣ.

ಅಗಾಧ ನೆನಪಿನ ಶಕ್ತಿ: ಅನಂತಕುಮಾರ್ ಅವರ ನೆನಪಿನ ಶಕ್ತಿ ನಿಜಕ್ಕೂ ಅಚ್ಚರಿ ತರುತ್ತದೆ. 1994ರಲ್ಲಿ 40 ಶಾಸಕರು ಗೆದ್ದಿದ್ದರು. ಅವರಿಗೆ ಕೇಶವಶಿಲ್ಪದಲ್ಲಿ ಅಭಿನಂದನೆ ಏರ್ಪಡಿಸಿದ್ದಾಗ ಒಂದು ಚೀಟಿ ಇಲ್ಲದೇ ಎಲ್ಲರ ವೈಯಕ್ತಿಕ ಪರಿಚಯ ಮಾಡಿಕೊಟ್ಟಿದ್ದರು. ಅದೇ ರೀತಿ ಚುನಾವಣೆಗೆ ಫೋಲ್ಡರ್ ರೆಡಿ ಮಾಡುವಾಗ ಸಹ ಯಾವುದೇ ಪುಸ್ತಕ, ನೋಟ್ಸ್ ಇಟ್ಟುಕೊಳ್ಳದೆ ಸಿದ್ಧಪಡಿಸುತ್ತಿದ್ದರು. ಪ್ರವಾಸ ಹೋದಾಗ ಕಾರ್ಯಕರ್ತರ ಮನೆಯಲ್ಲಿಯೇ ಉಳಿಯುತ್ತಿದ್ದರು. ರಾತ್ರಿ ವೇಳೆ ಮಾತ್ರ ಪ್ರವಾಸ ಮಾಡುತ್ತಿದ್ದರು.

ಇಂದು ಜನ್ಮದಿನ ಕಾರ್ಯಕ್ರಮ

ದಿ.ಅನಂತಕುಮಾರ್ ಅವರ 62ನೇ ಹುಟ್ಟುಹಬ್ಬದ ಆಚರಣೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಈ ಆನ್​ಲೈನ್ ಕಾರ್ಯಕ್ರಮದಲ್ಲಿ https://www.youtube.com/ananthkumar_bjp (ಯೂ ಟ್ಯೂಬ್ ಮತ್ತು ಜೂಮ್ ಆಪ್ ಮುಖಾಂತರ) ಅನಂತಕುಮಾರ್ ಅವರ ಆತ್ಮೀಯ ಬಳಗದ ಮಂತ್ರಿಗಳು, ಸಂಸದರು, ಶಾಸಕರು, ಸ್ನೇಹಿತರು ಉಪಸ್ಥಿತರಿರಲಿದ್ದಾರೆ.