ನ್ಯೂಸ್

ಮ್ಯಾನ್ಮಾರ್​ನಲ್ಲಿ ಮತ್ತೆ​​ ಭೂಕಂಪ; ಸಾವಿನ ಸಂಖ್ಯೆ 700 ಕ್ಕೆ ಏರಿಕೆ! Earthquake

earthquake | ಶುಕ್ರವಾರ (28) ಮಧ್ಯಾಹ್ನ ನೆರೆಯ ಆಗ್ನೇಯ ಏಷ್ಯಾದ ದೇಶವಾದ ಥೈಲ್ಯಾಂಡ್‌ ಹಾಗೂ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿ ಮ್ಯಾನ್ಮಾರ್​ ತತ್ತರಿಸಿದೆ. ಈ ನಡುವೆ ಶುಕ್ರವಾರ (28) ತಡರಾತ್ರಿ ಮತ್ತೆ ಭೂಕಂಪನ ಸಂಭವಿಸಿ ಸಾಕಷ್ಟು ಸಾವು ನೋವಿಗೆ ಎಡೆ ಮಾಡಿಕೊಟ್ಟಿದೆ.

ಇನ್ನೂ ಈ ಘಟನೆಯಿಂದ ಮತ್ತಷ್ಟು ಕಟ್ಟಡಗಳು ನೆಲಸಮವಾಗಿದ್ದು, ಘಟನೆಯಲ್ಲಿ 700 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಸಾವಿನ ಸಂಖ್ಯೆ ಒಂದು ಸಾವಿರ ದಾಟುವ ನಿರೀಕ್ಷೆ ಇದೆ. ಘಟನೆಯಲ್ಲಿ 1600 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಂಬುಲೆನ್ಸ್ ಸಹಾಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಘಟನೆಯಲ್ಲಿ ಹಲವಾರು ಕಟ್ಟಡಗಳು ನೆಲಸಮವಾಗಿವೆ. ರಸ್ತೆ, ವಿದ್ಯುತ್, ನೀರು ಮುಂತಾದ ಮೂಲಸೌಕರ್ಯಗಳು ಹಾಳಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆಯೇ ತಡರಾತ್ರಿ ಸಂಭವಿಸಿರುವ ಮತ್ತೊಂದು ಭೂಕಂಪ ಅಲ್ಲಿನ ಜನರನ್ನು ಮತ್ತಷ್ಟು ಆತಂಕಕ್ಕೆ ಗುರಿಮಾಡಿದೆ.

ಭೂಕಂಪ ಸಂಭವಿಸಿದ್ದು ಹೇಗೆ?

ಮ್ಯಾನ್ಮಾರ್‌ನ ಮಂಡಲೇ ನಗರದಲ್ಲಿ ಸುಮಾರು 1.2 ಮಿಲಿಯನ್ ಜನಸಂಖ್ಯೆ ವಾಸವಿವೆ. ಇನ್ನೂ ಮ್ಯಾನ್ಮಾರ್‌ನ ಮಂಡಲೇ ನಗರದಿಂದ ಸುಮಾರು 17.2 ಕಿ.ಮೀ ದೂರದಲ್ಲಿ, 10 ಕಿ.ಮೀ ಆಳದವರೆಗೆ ಶುಕ್ರವಾರ (28) ಮಧ್ಯಾಹ್ನದ ಸಮಯದಲ್ಲಿ ಭೂಕಂಪನ ಸಂಭವಿಸಿತ್ತು.

ಬೂಕಂಪನದಿಂದಾಗಿ ಕಟ್ಟಡಗಳು ಅಲ್ಲೋಲಕಲ್ಲೋಲಗೊಂಡಿದ್ದು, ಭೂಕಂಪನದ ತೀವೃತೆ ಹೆಚ್ಚಾಗಿದ್ದರಿಂದ ಸ್ಥಳೀಯ ಕೆರೆಗಳಲ್ಲಿದ್ದ ನೀರು ಹೊರಗೆ ಚಿಮ್ಮುತ್ತಿದ್ದ ದೃಶ್ಯಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಪ್ರಬಲವಾಗಿ ಭೂಕಂಪ ಸಂಭವಿಸಿದ ಪರಿಣಾಮ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನೂರಾರು ಜನರು ಭಯಬೀತರಾಗಿದ್ದು, ಗಾಬರಿಗೊಂಡ ಜನರು ಬಹುಮಹಡಿ ಕಟ್ಟಡಗಳು ಹಾಗೂ ಹೋಟೆಲ್‌ಗಳಿಂದ ಹೊರಗೆ ಓಡಿ ಬಂದಿದ್ದರು. ಅಪರೂಪದ ಭೂಕಂಪದಿಂದ ಅನೇಕ ಕಟ್ಟಡಗಳು ಅಲುಗಾಡುತ್ತಿದ್ದರಿಂದ ಕೆಲ ಜನರನ್ನು ಆ ಪ್ರದೇಶದಿಂದ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿದರು.

ಜನಜೀವನ ಅಸ್ತವ್ಯಸ್ತ

ಮ್ಯಾನ್ಮಾರ್ ರಸ್ತೆಗಳಲ್ಲಿ ಕಟ್ಟಡಗಳ ಅವಶೇಷಗಳು, ಹಾಳಾದ ರಸ್ತೆಗಳು, ಹಾಳಾದ ಮನೆಗಳು, ಜಖಂ ಆಗಿರುವ ವಾಹನಗಳು ಎದ್ದು ಕಾಣುತ್ತಿವೆ. ಜನರು ಆಹಾರ, ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ಘಟನೆಯಿಂದಾಗಿ ಎಷ್ಟೋ ಮನೆಗಳು ನೆಲಸಮವಾಗಿದ್ದು, ಎಲ್ಲರೂ ಸಹಾಯಕ್ಕಾಗಿ ಸರ್ಕಾರದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೆ ಭೂಮಿ ಕಂಪಿಸುವ ಆತಂಕ!

ಮ್ಯಾನ್ಮಾರ್​ನಲ್ಲಿ ಮಾ. 28 ರಂದು ಮಧ್ಯಾಹ್ನ ಹಾಗೂ ರಾತ್ರಿ ಎರಡು ಭೂಕಂಪ ಸಂಭವಿಸಿದ್ದು, ಮತ್ತೆ ಭೂಮಿ ಕಂಪಿಸುವ ಆತಂಕ ಜನರಲ್ಲಿ ಮನೆ ಮಾಡಿದೆ. ಮ್ಯಾನ್ಮಾರ್​ನ ಅಲ್ಲಲ್ಲಿ ಒಟ್ಟು 9 ಬಾರಿ ಲಘು ಭೂಕಂಪನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಅಲ್ಲಿ ವಾಸ ಮಾಡುತ್ತಿರುವ ಜನರು ಭಯಭೀತರಾಗಿದ್ದು, ಯಾವಾಗ ಏನು ಸಂಭವಿಸುವುದೋ ಎಂಬ ಭಯದಲ್ಲಿದ್ದಾರೆ.