ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆ ಕೌಶಲ್ಯ-2024ನ್ನು ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಡಿ.ಎಸ್.ಅರುಣ್, ಡಾ.ಬಿ.ಎಸ್.ಶಿವಪ್ರಸಾದ್, ಡಾ.ಪಿ.ನಾರಾಯಣ್, ಟಿ.ಆರ್.ಅಶ್ವತ್ಥ ನಾರಾಯಣ ಶ್ರೇಷ್ಟಿ ಮುಂತಾದವರಿದ್ದರು.  
ನ್ಯೂಸ್

ಕಲೆ, ಸಾಹಿತ್ಯ, ಸಂಸ್ಕೃತಿ ನಮ್ಮ ದೇಶದ ಅಸ್ಮಿತೆ: ಶಾಸಕ ಚೆನ್ನಿ

ಶಿವಮೊಗ್ಗ: ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ನಮ್ಮ ದೇಶದ ಅಸ್ಮಿತೆ. ಸಾಂಸ್ಕೃತಿಕ ರಾಷ್ಟ್ರದಲ್ಲಿ ಬಾಳುತ್ತಿರುವ ನಮ್ಮಲ್ಲಿ ಸೃಜನಶೀಲತೆ ಎಂಬುದು ಸದಾ ಪ್ರಕಾಶಿಸುತ್ತಿರಲಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ನಗರದ ಎನ್‌ಇಎಸ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜಿನಲ್ಲಿ ಶನಿವಾರ ವಿವಿಧ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧೆ ಕೌಶಲ್ಯ-2024 ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಸದಾ ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ. ಇಂದಿನ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ಸಿಗುತ್ತಿದೆ. ಇದು ನಮ್ಮಲ್ಲಿ ಅದ್ಭುತ ಆತ್ಮವಿಶ್ವಾಸ ಮೂಡಿಸಿ ಶಕ್ತಿಯುತ ವ್ಯಕ್ತಿತ್ವ ಹೊರಹೊಮ್ಮಲು ಪ್ರೇರಕವಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದಿನ ಸನ್ನಿವೇಶದಲ್ಲಿ ಶಿಕ್ಷಣದ ಜತೆಗೆ ಸೃಜನಶೀಲತೆ ಬೆಳೆಸುವ ಅನೇಕ ವೇದಿಕೆಗಳು ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ಸಂಗತಿ. ಬಹಳ ಹಿಂದೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತ ಚೌಕಟ್ಟು ಇತ್ತು. ಇಂದು ಅನೇಕ ಅವಕಾಶಗಳಿವೆ ಎಂದರು.

ಎನ್‌ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವತ್ಥ ನಾರಾಯಣ ಶ್ರೇಷ್ಟಿ, ಪ್ರಾಚಾರ್ಯ ಡಾ.ಬಿ.ಎಸ್.ಶಿವಪ್ರಸಾದ್ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 24ಕ್ಕೂ ಹೆಚ್ಚು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.

ಬೆಸ್ಟ್ ಸಿಇಒ, ಮೊಬೈಲ್ ಫೋಟೋಗ್ರಫಿ, ಸಾಮಾನ್ಯ ಜ್ಞಾನ, ಸಂಯೋಜಿತ ಆಟಗಳು, ಹಾಡು ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಪಾಲ್ಗೊಂಡರು.