ಕಲಾ ಉತ್ಸವ ಕೊಡಗು 9 ನೇ ವರ್ಷದ ಕಲಾ ಶಿಬಿರ ಕಾರ್ಯಕ್ರಮದಲ್ಲಿ ಉದ್ದೇಶಿಸಿ ವಿ.ಟಿ. ನಾಣಯ್ಯ ಮಾತನಾಡಿದರು. ಸಾಧಿಕ್ ಹಂಸ, ಸತೀಶ್, ಮೊಹಮ್ಮದ್ ರಫಿ ಇದ್ದರು.  
ನ್ಯೂಸ್

ಕಲೆ, ಸಾಹಿತ್ಯ ಸಂಸ್ಕೃತಿ ಸದಾ ಜೀವಂತ

ವಿರಾಜಪೇಟೆ : ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಜನ ಹುಟ್ಟಿನಿಂದ ಬಂದಿರುವ ಬಳುವಳಿಯಾಗಿದೆ. ಇವುಗಳು ಮರೆಯಾಗುವುದಿಲ್ಲ. ಕಲೆಯನ್ನು ಪ್ರೋತ್ಸಾಹಿಸುವ ಮನಸ್ಸುಗಳು ಇದ್ದಲ್ಲಿ ಕಲೆಗೆ ಜೀವ ಬರುತ್ತದೆ ಎಂದು ಹವ್ಯಾಸಿ ಛಾಯಾಗ್ರಹಕ ಮತ್ತು ಕಲಾವಿದ ಜುನೈಶ್ ಕಣ್ಣೂರು ಹೇಳಿದರು.

ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ, ಚಿತ್ರಕಲೆ ಕಲಾವಿದರಾದ ಸಾಧಿಕ್ ಹಂಸ ಅವರು ಆಯೋಜಿಸಿದ್ದ ಕಲಾ ಉತ್ಸವ ಕೊಡಗು 9ನೇ ವರ್ಷದ ಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಲೆ ನಿಂತ ನೀರಲ್ಲ, ಬದಲಿಗೆ ಹರಿಯುವ ನದಿಯಂತೆ, ಎಲ್ಲ ಮನಸ್ಸುಗಳಲ್ಲಿ ಕಲೆ ಎಂಬುದು ಸುಪ್ತವಾಗಿ ಉಳಿದಿರುತ್ತದೆ. ಅದನ್ನು ಪ್ರದರ್ಶನ ಮಾಡಿದಲ್ಲಿ ಕಲಾವಿದ ಪ್ರಚಾರ ಪಡೆದುಕೊಳ್ಳುತ್ತಾನೆ ಎಂದು ಶಿಬಿರಕ್ಕೆ ಶುಭ ಹಾರೈಸಿದರು.

ಕೊಡಗಿನ ಹಿರಿಯ ಚಿತ್ರಕಲಾವಿದ ಬಾವ ಮಾಲ್ದಾರೆ ಮಾತನಾಡಿ, ಪ್ರತಿಯೊಬ್ಬರೂ ಕಲೆಯ ಶ್ರೀಮಂತಿಕೆಯನ್ನು ಗೌರವಿಸಬೇಕು. ಯಾವ ವ್ಯಕ್ತಿ ಕಲೆಯನ್ನು ಅಭಿಮಾನದಿಂದ ಪ್ರೋತ್ಸಾಹಿಸಿ, ಗೌರವಿಸಿ ಕಲೆಗಾರರನ್ನು ಮುಕ್ತಮನಸ್ಸಿನಿಂದ ಪ್ರಶಂಸೆ ಮಾಡುತ್ತಾನೋ ಆತ ಕಲೆಯ ಅಭಿಮಾನಿಯಾಗುತ್ತಾನೆ. ರಾಜ್ಯ ಹಾಗೂ ಕೇರಳ ರಾಜ್ಯದ ಹೆಸರಾಂತ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿರುವ ಸಾಧಿಕ್ ಅವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ನಟ ಮತ್ತು ನಿವೃತ್ತ ಪ್ರಾಧ್ಯಾಪಕ ವಾಂಚಿರ ಟಿ. ನಾಣಯ್ಯ ಮಾತನಾಡಿ, ಕಲೆಗೆ ಯಾವುದೇ ಜಾತಿ, ಮತ, ಧರ್ಮ,ಬಡವ ಬಲ್ಲಿದ ಎನ್ನುವ ಭೇದವಿಲ್ಲ. ಕಲೆಯನ್ನು ಸುಲಭವಾಗಿ ಕರಗತಗೊಳಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ಅಪ್ಪುಗೆಯಿಂದ ಆಲಿಂಗಿಸಿ, ಒಳಹೊಕ್ಕು ಕಲೆಯ ಆಳ ಅಗಲವನ್ನು ಗ್ರಹಿಸಿದಲ್ಲಿ ಮಾತ್ರ ಕಲೆಗಾರನಾಗಲು ಸಾಧ್ಯ ಎಂದು ಬಣ್ಣಿಸಿದರು.

ಕೊಡಗಿನ ಚಿತ್ರಕಲಾ ಶಿಕ್ಷಕರು, ರಾಜ್ಯ ಪ್ರಶಸ್ತಿ ವಿಜೇತರಾದ ಬಿ.ಆರ್ ಸತೀಶ್, ಪುರಸಭಾ ಮಾಜಿ ಸದಸ್ಯ ಮೊಹಮ್ಮದ್ ರಫಿ, ವಾಸವನ್ ಪಯ್ಯಟಂ, ಕಾಸರಗೋಡು ನಿವೃತ್ತ ಚಿತ್ರಕಲಾ ಶಿಕ್ಷಕ ಎಂ. ದಾಮೋಧರನ್ ಕಣ್ಣೂರು, ಸಾಹಿತಿ ವೈಲೇಶ್, ಕಲಾ ಉತ್ಸವ ಆಯೋಜಕ ಸಾಧಿಕ್ ಹಂಸ, ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಹಿರಿಯ, ಕಿರಿಯ ಕಲಾವಿದರು, ಕೇರಳ ಚಿತ್ರಕಲಾ ಪರಿಷತ್‌ನ ಸದಸ್ಯರು ಪಾಲ್ಗೊಂಡಿದ್ದರು.