ನ್ಯೂಸ್

ಸೇನೆಗೆ ಸೇರಲು ಯತ್ನಿಸಿದ್ದ ಐಎಸ್​ಐ ಗೂಢಚಾರಿ! 3 ತಿಂಗಳ ಹಿಂದೆ ಬಟ್ಟೆ ವ್ಯಾಪಾರಿಯನ್ನು ಸಂರ್ಪಸಿದ್ದ ಐಎಸ್​ಐ

ಬೆಂಗಳೂರು: ಆರ್ವಿು ಕಮ್ಯಾಂಡೊ ವೇಷ ಧರಿಸಿ ದೇಶದ ಪ್ರಮುಖ ಮಿಲಿಟರಿ ಪ್ರದೇಶಗಳ ಫೋಟೊಗಳನ್ನು ಪಾಕಿಸ್ತಾನದ ಐಎಸ್​ಐಗೆ ರವಾನಿಸಿ ಗೂಢಾಚಾರಿಕೆ ಮಾಡುತ್ತಿದ್ದ ಬಟ್ಟೆ ವ್ಯಾಪಾರಿ ಸೇನೆಗೆ ಸೇರಲು ವಿಫಲ ಯತ್ನ ನಡೆಸಿದ್ದ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.

ರಾಜಸ್ಥಾನ ಮೂಲದ ನಗರದ ಕಾಟನ್​ಪೇಟೆ ನಿವಾಸಿ ಜೀತೇಂದರ್ ಸಿಂಗ್ ಪಾಕಿಸ್ತಾನದ ಐಎಸ್​ಐಗೆ ಗೂಢಚಾರಿ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಜಿತೇಂದರ್ ದೂರದ ಸಂಬಂಧಿಯೊಬ್ಬರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಂಡು ಈತನೂ ಮಿಲಿಟರಿಗೆ ಸೇರುವ ಆಕಾಂಕ್ಷೆ ಹೊಂದಿದ್ದ. ಜವಾನ ಹುದ್ದೆಗೂ ಅರ್ಜಿ ಹಾಕಿದ್ದ. ಆದರೆ, ಪರೀಕ್ಷೆಯಲ್ಲಿ ಅನುತೀರ್ಣನಾಗಿದ್ದ. ಮಿಲಿಟರಿಯಲ್ಲಿ ಸೈನಿಕನಾಗಲು ಕನಿಷ್ಠ 10ನೇ ತರಗತಿ ವ್ಯಾಸಂಗ ಮಾಡಿರಬೇಕು. ಆದರೆ, ಜಿತೇಂದರ್ ಓದಿದ್ದು ಕೇವಲ 6ನೇ ತರಗತಿ ಮಾತ್ರ. ಹೀಗಾಗಿ ಸೇನೆಯಲ್ಲಿ ಖಾಲಿಯಿದ್ದ ಸಣ್ಣ-ಪುಟ್ಟ ಹುದ್ದೆಗಳಾದ ಬಾಣಸಿಗ, ದೋಬಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ.

ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಜೀತೆಂದರ್ ಸಿಂಗ್​ಗೆ ಮೂರು ತಿಂಗಳ ಹಿಂದೆಯಷ್ಟೇ ಐಎಸ್​ಐ ಏಜೆಂಟ್​ಗಳು ಯುವತಿಯ ಸೋಗಿನಲ್ಲಿ ಗಾಳ ಹಾಕಿದ್ದರು. ಯುವತಿಯ ಸೋಗಿನಲ್ಲಿ ಐಎಸ್​ಐ ಏಜೆಂಟ್​ಗಳು ‘ತಾನು ಪಾಕಿಸ್ತಾನ ಮೂಲದವಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿದ್ದೇನೆ. ನನಗೆ ಭಾರತ ಕಂಡರೆ ಇಷ್ಟ. ಅದರಲ್ಲೂ ಸೈನಿಕರ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದರು. ಆರಂಭದಲ್ಲಿ ಚಾಟಿಂಗ್ ಮಾಡುತ್ತಿದ್ದ ಐಎಸ್​ಐ ಏಜೆಂಟ್​ಗಳು ನಂತರ ಯುವತಿಯ ಸೋಗಿನಲ್ಲೇ ಜಿತೇಂದರ್​ಗೆ ಕರೆ ಮಾಡಿ ಸೇನೆಯ ಬಗ್ಗೆ ಮಾಹಿತಿ ಕಲೆ ಹಾಕಲು ಯತ್ನಿಸಿದ್ದರು. ಯುವತಿಯ ಮೋಹಕ್ಕೆ ಸಿಲುಕಿದ ಆರೋಪಿ ಸೇನಾ ನೆಲೆಗಳ ಪೋಟೊಗಳನ್ನು ಕಳುಹಿಸುತ್ತಿದ್ದ.