ಬೆಂಗಳೂರು: ಮದ್ಯ ಸೇವಿಸಲು ಹಣ ಕೊಡದಿದ್ದಕ್ಕೆ ಸ್ನೇಹಿತ ನನ್ನೇ ಇರಿದು ಕೊಂದಿದ್ದಲ್ಲದೆ, ಈ ಕೊಲೆಯನ್ನು ಕಂಡ ಮತ್ತೋರ್ವ ಸ್ನೇಹಿತನನ್ನು ಹತ್ಯೆ ಮಾಡಿದ್ದ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರ ಮೂಲದ ಬಾಲಾಜಿ (45) ಹಾಗೂ ಚಿಂತಾಮಣಿ ಮೂಲದ ರಮೇಶ್ (35) ಕೊಲೆಯಾದವರು. ಕೃತ್ಯ ಎಸಗಿದ ವೈಯಾಲಿಕಾವಲ್ ನಿವಾಸಿ ಶಂಕರ್ (23) ಹಾಗೂ ಹೆಬ್ಬಾಳ ನಿವಾಸಿ ಚಿಂತಾಮಣಿ ಮೂಲದ ಮಂಜುನಾಥ್ (32) ಬಂಧಿತರು. ಕುಂಟ
ಮತ್ತು ಸೋಮ ತಲೆಮರೆಸಿ ಕೊಂಡಿದ್ದಾರೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.
ಮೇ 7ರಂದು ಕೋಗಿಲು ಕ್ರಾಸ್ ಬಳಿಯ ಮೇಲ್ಸೇತುವೆ ಕೆಳಗಡೆ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ, ಮೇ 6ರ ತಡರಾತ್ರಿ ಕೃತ್ಯ ನಡೆದು, ಮರುದಿನ ಬೆಳಕಿಗೆ ಬಂದಿತ್ತು. ಚೂರಿಯಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ಕಣ್ಣಾರೆ ಕಂಡವನನ್ನೂ ಬಿಡಲಿಲ್ಲ: ಬಾಲಾಜಿ, ರಮೇಶ್ ಹಾಗೂ ಶಂಕರ್, ಮಂಜುನಾಥ್, ಕುಂಟ ಮತ್ತು ಸೋಮ ಎಂಬ ಸ್ನೇಹಿತರಾಗಿದ್ದು, ಎಲ್ಲರೂ ಒಟ್ಟಾಗಿ ಚಿಂದಿ ಆಯುತ್ತಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಕೋಗಿಲು ಕ್ರಾಸ್ ಬಳಿಯ ಮೇಲ್ಸೇತುವೆ ಕೆಳಗಡೆ ಆಶ್ರಯ ಪಡೆದಿದ್ದರು. ಮೇ 6ರಂದು ರಾತ್ರಿ ಮದ್ಯ ಸೇವಿಸಲು ಖರ್ಚಿಗೆ ಬಾಲಾಜಿಯನ್ನು ಹಣ ಕೇಳಿದ್ದಾರೆ. ಈ ವೇಳೆ ಬಾಲಾಜಿ ತನ್ನ ಬಳಿ ಹಣವಿಲ್ಲ ಎಂದಿದ್ದ. ಇದೇ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿ, ನಾಲ್ವರು ಸೇರಿ ಬಾಲಾಜಿಯನ್ನು ಹತ್ಯೆ ಮಾಡಿದ್ದಾರೆ. ಕೃತ್ಯವನ್ನು ಕಣ್ಣಾರೆ ನೋಡಿದ್ದ ರಮೇಶ್ಉಉಯುಮ ಹತ್ಯೆ ಮಾಡಿ, ಶವವನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2 ದಿನದಲ್ಲಿ ಮತ್ತೊಂದು ಶವ ಪತ್ತೆ: ಮೇ 8ರಂದು ಸಂಜೆ 6.45ರಲ್ಲಿ ಗಸ್ತು ಡ್ಯೂಟಿಯಲ್ಲಿದ್ದ ಪೊಲೀಸರಿಗೆ, ಯಲಹಂಕದ ರೈಲ್ವೆ ಹಳಿ ಬಳಿಯ ನೀಲಗಿರಿ ತೋಪಿನಲ್ಲಿ ಬೆಂಕಿಯಿಂದ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. 2-3 ದಿನದ ಹಿಂದೆ ಬೇರೆಡೆ ಕೊಲೆ ಮಾಡಿ ಶವವನ್ನು ತಂದು ಬೆಂಕಿ ಇಟ್ಟಿರುವುದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಈ ಪ್ರಕರಣದಲ್ಲಿಯೂ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ತನಿಖೆಗೆ ನೆರವಾದ ಸಿಸಿ ಕ್ಯಾಮರಾ
ಎರಡು ದಿನದ ಅಂತರದಲ್ಲಿ ಅಪರಿಚಿತ ವ್ಯಕ್ತಿಗಳ ಎರಡು ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ತನಿಖೆ ಕೈಗೊಳ್ಳಲಾಗಿತ್ತು. ಕೋಗಿಲು ಕ್ರಾಸ್ ಬಳಿಯ ಮೇಲ್ಸೇತುವೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದ ವ್ಯಕ್ತಿಗಳ ಮುಖಚಹರೆ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದ ಚಪ್ಪಲಿ ಧರಿಸಿದ್ದ ವ್ಯಕ್ತಿ ಗುಂಪಿನಲ್ಲಿದ್ದ. ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.