ನ್ಯೂಸ್

ಮಾಜಿ ಪಿಎಂ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರಂಟ್

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಶೇಖ್ ಹಸೀನಾ, ಅವರ ಸಹೋದರಿ ಶೇಖ್ ರೆಹಾನಾ ಮತ್ತು ಬ್ರಿಟನ್​ನ ಸಂಸದ ಟುಲಿಪ್ ರಿಜ್ವಾನ್ ಸಿದ್ದಿಕಿ ಹಾಗೂ ಇತರ 50 ಜನರ ವಿರುದ್ಧ ಬಾಂಗ್ಲಾದೇಶದ ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದೆ. ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಭೂ ಸ್ವಾಧೀನ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಆಯೋಗ 3 ಪ್ರತ್ಯೇಕ ಚಾರ್ಜ್​ಶೀಟ್​ಗಳನ್ನು ಕೋರ್ಟ್​ಗೆ ಸಲ್ಲಿಸಿದೆ. ಹೀಗಾಗಿ ಢಾಕಾ ಮೆಟ್ರೋಪಾಲಿಟನ್ ಕೋರ್ಟ್​ನ ಹಿರಿಯ ವಿಶೇಷ ನ್ಯಾಯಾಧೀಶ ಜಾಕಿರ್ ಹುಸೇನ್ ಅರೆಸ್ಟ್ ವಾರಂಟ್ ಹೊರಡಿಸಿದ್ದಾರೆ.

ಬಂಧನದ ಆದೇಶದ ಅನುಷ್ಠಾನ ವರದಿ ಪರಿಶೀಲಿಸಲು ಏ.27ರ ದಿನಾಂಕ ನಿಗದಿಪಡಿಸಿದ್ದಾರೆ. ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲೂ ಏ.10ರಂದು ಕೋರ್ಟ್ ಶೇಖ್ ಹಸೀನಾ, ಅವರ ಪುತ್ರಿ ಸೈಮಾ ವಾಜಿದ್ ಪುತುಲ್ ಹಾಗೂ ಇತರ 17 ಜನರ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿತ್ತು. ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಸರ್ಕಾರ 2024ರ ಆಗಸ್ಟ್ 5ರಂದು ಪತನವಾಗಿತ್ತು. ಹಸೀನಾ ಬಾಂಗ್ಲಾದಿಂದ ಭಾರತಕ್ಕೆ ಪಲಾಯನ ಮಾಡಿದ್ದರು. ಆ ಬಳಿಕ ಹಸೀನಾ ವಿರುದ್ಧ ಸಾಮೂಹಿಕ ಹತ್ಯೆ, ಮಾನವತೆಯ ವಿರುದ್ಧದ ಅಪರಾಧಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಮೇಲೆ ಹಲವು ಮೊಕದ್ದಮೆಗಳು ದಾಖಲಾಗಿವೆ.