ನ್ಯೂಸ್

೪೨ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಬಂಧನ

ಬೆಂಗಳೂರು: ಸುಲಿಗೆ, ಕಳ್ಳತನ, ದರೋಡೆ ಸೇರಿ ೪೨ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿ ಠಾಣೆಯ ರೌಡಿಶೀಟರ್ ಅಜೀಜ್ ಆಸೀಫ್(೩೩) ಬಂಧಿತ ಆರೋಪಿ.
ಈತ ೨೦೧೫ ರಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ೩೬, ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ೭ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ೨ ಪಕರಣಗಳು ಸೇರಿ ಗೋವಾ ರಾಜ್ಯದಲ್ಲಿಯೂ ಸಹ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಭಾರತಿನಗರ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ತಲಾ ೧ ಕಳುವು ಪ್ರಕರಣ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ೨ ರಾಬರಿ ಪ್ರಕರಣ, ತುಮಕೂರು ಜಿಲ್ಲೆಯ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ೧ ದ್ವಿಚಕ್ರ ವಾಹನ ಕಳುವು ಪ್ರಕರಣ ಮತ್ತು ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ೨ ರಾಬರಿ ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿದೆ.ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರು ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಮ್ ಸ್ಟ್ರಾಂಗ್ ರಸ್ತೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನ ಬಳಿ ವಿವಿಧ ಕಂಪನಿಯ ಒಟ್ಟು ೧೨ ಮೊಬೈಲ್ ಪೋನ್‌ಗಳು, ೪ ಚಿನ್ನದ ಕಾಸಿನ ತಾಳಿಗಳು, ೧ ಮಾಂಗಲ್ಯ, ೨ ಚಿನ್ನದ ಗುಂಡುಗಳು, ಕೊಳವೆ ಆಕಾರದ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನ ವಿರುದ್ಧ ಬಾಕಿ ಇರುವ ಜಾಮೀನುರಹಿತ ವಾರೆಂಟ್ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.