ನ್ಯೂಸ್

ಅಪಚಿತ ವ್ಯಕ್ತಿ ಕೊಂದಿದ್ದ ಇಬ್ಬರ ಬಂಧನ: ಮಲಗುವ ಜಾಗದ ವಿಚಾರಕ್ಕೆ ನಡೆದಿದ್ದ ಜಗಳ

ಬೆಂಗಳೂರು: ಮಲಗುವ ಜಾಗದ ವಿಚಾರಕ್ಕೆ ನಡೆದ ಜಗಳದ ವೇಳೆ ಅಪರಿಚಿತ ವ್ಯಕ್ತಿಯನ್ನು ಕಾಲನಿಂದ ಒದ್ದು ಕೊಲೆ ಮಾಡಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ಸೈಯದ್ ಕರ್ಮಾನ್(೩೬) ಮತ್ತು ವಿಶಾಲ್ ಅಹಿವಾದಾಸ್(೩೫) ಬಂಧಿತರು. ಆರೋಪಿಗಳು ಡಿ.೧೧ರ ರಾತ್ರಿ ಆರ್.ಟಿ.ನಗರದ ಕೃಷ್ಣಪ್ಪ ಕಾಂಪ್ಲೆಕ್ಸ್ ಬಿಲ್ಡಿಂಗ್‌ನ ತಳಮಹಡಿಯಲ್ಲಿ ಸುಮಾರು ೫೫ ವರ್ಷದ ಅಪರಿಚಿತ ವ್ಯಕ್ತಿಗೆ ಎದೆ ಹಾಗೂ ಮುಖದ ಮೇಲೆ ಕೈ ಮತ್ತು ಕಾಲಿನಿಂದ ಒದ್ದು ಕೊಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಾದ ಸೈಯದ್ ಕರ್ಮಾನ್ ಮತ್ತು ವಿಶಾಲ್ ಕೌಟುಂಬಿಕ ಕಲಹದಿಂದ ಮನೆಯಿಂದ ಹೊರದೂಡಲ್ಪಟ್ಟಿದ್ದಾರೆ. ಆರೋಪಿ ಕರ್ಮಾನ್ ವಿರುದ್ಧ ಈ ಹಿಂದೆ ಆರ್.ಟಿ.ನಗರ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣ ದಾಖಲಾಗಿತ್ತು. ಆರೋಪಿ ವಿಶಾಲ್ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಮನೆಯಿಂದ ಹೊರಬಿದ್ದ ಬಳಿಕ ಇಬ್ಬರು ಆರ್.ಟಿ.ನಗರ, ಹೆಬ್ಬಾಳ ಸೇರಿ ವಿವಿಧೆಡೆ ಸುತ್ತಾಡಿ ಸಿಕ್ಕ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಮದ್ಯ ಸೇವಿಸಿ ಆರ್.ಟಿ.ನಗರದ ಕೃಷ್ಣಪ್ಪ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿ ಮಲಗಿಕೊಂಡು ಜೀವನ ದೂಡುತ್ತಿದ್ದರು.
ತಾವು ಮಲಗುವ ಜಾಗದಲ್ಲಿ ಆತ ಮಲಗಿದ್ದಕ್ಕೆ ಕೊಲೆ !
ಡಿ.೧೧ರಂದು ರಾತ್ರಿ ಇಬ್ಬರು ಮದ್ಯ ಸೇವಿಸಿಕೊಂಡು ಮಲಗಲು ನೆಲಮಹಡಿಗೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಅಪರಿಚಿತ ವ್ಯಕ್ತಿ ಆ ಜಾಗದಲ್ಲಿ ಮಲಗಿರುವುದು ಕಂಡು ಬಂದಿದೆ. ಈ ವೇಳೆ ಇಬ್ಬರೂ ಆರೋಪಿಗಳು ಆ ಅಪರಿಚಿತನ ಮೇಲೆ ಜಗಳಕ್ಕೆ ಬಂದಿದ್ದಾರೆ. ರೊಚ್ಚಿಗೆದ್ದು ಆ ಅಪರಿಚಿತನ ಎದೆ ಹಾಗೂ ಮುಖದ ಮೇಲೆ ಮನಸೋ ಇಚ್ಚೆ ಒದ್ದು ಕೊಲೆ ಮಾಡಿ ಪರಾರಿಯಾಗಿದ್ದರು. ಮಾರನೇ ದಿನ ನೆಲಮಹಡಿಯಲ್ಲಿ ಅಪರಿಚಿತನ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರ್.ಟಿ.ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು.
ಕೊಲೆಯಾದವನ ಗುರುತು ಪತ್ತೆಯಾಗಿಲ್ಲ:
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಆರ್.ಟಿ.ನಗರ ಠಾಣೆ ಪೊಲೀಸರು, ಸ್ಥಳೀಯರು ನೀಡಿದ ಮಾಹಿತಿ ಹಾಗೂ ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿಯ ಸುಳಿವು ಆಧರಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾಗಿರುವ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹವನ್ನು ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೇಲ್ನೋಟಕ್ಕೆ ಈತನೂ ಕುಟುಂಬದಿಂದ ದೂರವಾಗಿರುವ ವ್ಯಕ್ತಿಯ ಹಾಗೆ ಕಾಣುತ್ತಾರೆ. ಆದರೂ ಮೃತ ಅಪರಿಚಿತ ವ್ಯಕ್ತಿಯ ಗುರುತು ಹಾಗೂ ವಾರಸುದಾರರ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.