ನ್ಯೂಸ್

ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರ ಬಂಧನ

ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು ಹಿಂಬಾಲಿಸಿ ಹೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರ ನಿವಾಸಿ ಮಹಮದ್ ಜಬಿ(೨೩) ಮತ್ತು ಭಾರತಿನಗರ ನಿವಾಸಿ ಶೇಕ್ ಜುನೇದ್(೨೦) ಬಂಧಿತರು. ಆರೋಪಿಗಳಿಂದ ೫.೫೦ ಲಕ್ಷ ರೂ. ಮೌಲ್ಯದ ೩ ದ್ವಿಚಕ್ರ ವಾಹನ, ಲ್ಯಾಪ್‌ಟಾಪ್, ವಿವಿಧ ಕಂಪನಿಗಳ ೯ ಮೊಬೈಲ್ ಫೋನ್‌ಗಳು ಹಾಗೂ ಸ್ಮಾರ್ಟ್ ವಾಚ್ ಜಪ್ತಿ ಮಾಡಲಾಗಿದೆ.
ಆರೋಪಿಗಳು ಅ.೧೭ ರಂದು ಹಲಸೂರು, ರಾಮಮೂರ್ತಿ ನಗರದಲ್ಲಿ ಸುಲಿಗೆ ಮಾಡಿದ್ದರು. ಒಂದೇ ದಿನ ಎರಡು ಕೃತ್ಯ ಎಸಗಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಮಹಮದ್ ಜಬಿ ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಉಪ್ಪಾರಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ, ಪುಲಿಕೇಶಿನಗರ, ಭಾರತಿನಗರ, ಹೆಬ್ಬಾಳ, ಕೆ.ಆರ್.ಪುರ, ಹೆಣ್ಣೂರು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು, ರಾಮೂರ್ತಿನಗರ ಠಾಣೆಯಲ್ಲಿ ರಾಬರಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೦ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದು ನಂತರ ಆರೋಪಿ ಶೇಖ್ ಜುನೇದ್ ಜತೆ ಸೇರಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದನು.
ಮಾರಕಾಸ್ತ್ರ ತೋರಿಸಿ ಸುಲಿಗೆ:
ಆರೋಪಿಗಳು ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ಪಾದಾಚಾರಿಗಳನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಮೊಬೈಲ್, ಪರ್ಸ್, ಬ್ಯಾಗ್ ಸೇರಿ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಸುಲಿಗೆ ಮಾಡಿದ ಮಾಲುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಾಡಿ ವ್ಯಯಿಸುತ್ತಿದ್ದರು. ಆರೋಪಿಗಳ ಬಂಧನದಿಂದ ಹಲಸೂರು ಠಾಣೆಯ ಮೂರು, ಕೋರಮಂಗಲ, ರಾಮಮೂರ್ತಿನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ತಲಾ ಒಂದು ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.