ನ್ಯೂಸ್

ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಬೆಂಗಳೂರು: ಕಿಟಕಿಯ ಕಬ್ಬಿಣದ ಗ್ರಿಲ್ ಕತ್ತರಿಸಿ ಮನೆ ಪ್ರವೇಶಿಸಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿ ಮಾರುತಿನಗರ ನಿವಾಸಿ ಹಮೀದ್ ಖಾನ್ (೫೭) ಮತ್ತು ಕಗ್ಗಲಿಪುರ ಮುಖ್ಯರಸ್ತೆಯ ಗುಡಿಮಾವು ನಿವಾಸಿ ಖಲೀಲ್ ಉಲ್ಲಾ ಶರೀಫ್ (೩೪) ಬಂಧಿತರು. ಆರೋಪಿಗಳಿಂದ ೧೫ ಲಕ್ಷ ರೂ. ಮೌಲ್ಯದ ೨೦೮ ಗ್ರಾಂ ಚಿನ್ನಾಭರಣ, ಒಂದು ಕೆ.ಜಿ.ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಆರೋಪಿಗಳು ಕಳೆದ ತಿಂಗಳು ಬನಶಂಕರಿ ೬ನೇ ಹಂತದ ೨ನೇ ಬ್ಲಾಕ್‌ನ ಮನೆಯೊಂದರ ಕಿಟಕಿ ಗ್ರಿಲ್ ಕತ್ತರಿಸಿ ಮನೆ ಪ್ರವೇಶಿಸಿ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನೂರಕ್ಕೂ ಅಧಿಕ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳುವಿನ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು ನಗರದ ವಿವಿಧೆಡೆ ದ್ವಿಚಕ್ರ ವಾಹನದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಅಥವಾ ಕಿಟಕಿ ಗ್ರಿಲ್ ಕತ್ತರಿಸಿ ಮನೆ ಪ್ರವೇಶಿಸಿ ಕಳ್ಳತನ ಮಾಡುತ್ತಾರೆ. ಬಳಿಕ ಕದ್ದ ವಸ್ತುಗಳನ್ನು ಪರಿಚಿತರ ಮುಖಾಂತರ ವಿಲೇವಾರಿ ಮಾಡಿಸಿ ಹಣ ಪಡೆದು ಮೋಜು ಮಾಡುತ್ತಾರೆ. ಈ ಹಿಂದೆ ಸಹ ಹಲವು ಬಾರಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ನೆರೆಯ ಆಂಧ್ರಪ್ರದೇಶದ ಮತ್ತು ಕೇರಳ ರಾಜ್ಯಗಳಲ್ಲಿಯೂ ಮನೆಗಳ್ಳತನ ಮಾಡಿ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತಮ್ಮ ಮನೆಗಳವು ಚಾಳಿ ಮುಂದುವರಿಸಿದ್ದರು. ಆರೋಪಿಗಳ ಬಂಧನದಿಂದ ತಲಘಟ್ಟಪುರ ಮತ್ತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.