ನ್ಯೂಸ್

ಮೂವರು ಕಳ್ಳರ ಬಂಧನ

ಕಿರುವಾರ ಎಸ್.ಸುದರ್ಶನ್

ಕೋಲಾರ: ನಗರದ ಗಲ್​ಪೇಟೆ ಪೊಲೀಸರು ಸೋಮವಾರ ಮೂವರು ಕಳ್ಳರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಾಲೂಕಿನ ಕೂತಾಂಡಹಳ್ಳಿ ನಿವಾಸಿಗಳಾದ ನರೇಂದ್ರ (23), ಅನಿಲ್​ (28) ಹಾಗೂ ಗದ್ದೆಕಣ್ಣೂರು ನಿವಾಸಿ ಎಸ್​.ಚಂದ್ರನ್​ (19) ಬಂಧಿತ ಆರೋಪಿಗಳು.

ಆರೋಪಿಗಳಿಂದ ಒಟ್ಟು 14,50,000 ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದು, ಆ ಪೈಕಿ 7,88,400 ರೂ. ಮೌಲ್ಯದ 4 ಚಿನ್ನದ ಸರ, 3,4,500 ನಗದು, ಕದ್ದ ಹಣದಿಂದ ಖರೀದಿಸಿದ್ದ ಬೈಕ್​, ಕಳವಿಗೆ ಬಳಕೆ ಮಾಡಿದ್ದ ಬೈಕ್​ ವಶಕ್ಕೆ ಪಡೆಯಲಾಗಿದೆ.

ವೇಮಗಲ್​ ಠಾಣೆಯ ವ್ಯಾಪ್ತಿಯ ಚೊಕ್ಕಹಳ್ಳಿ ಚಿನ್ಮಯ ಶಾಲೆಯಲ್ಲಿ 12 ಲಕ್ಷ ರೂ. ನಗದು, ದಾನಹಳ್ಳಿ ಕೆರೆ ಸಮೀಪ, ಚದುಮನಹಳ್ಳಿಯಲ್ಲಿ ಸರ, ಖಾಜಿಕಳ್ಳಿ ಸಮೀಪ ಹಣ ಸುಲಿಗೆ, ಮೊಬೈಲ್​, ನಗರದ ಸರ್ಕಾರಿ ಬಾಲಕಿಯರ ಕಾಲೇಜು ಬಳಿ ಕಳವು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಆನಂದರೆಡ್ಡಿ ಬಡಾವಣೆಯಲ್ಲಿ ಸರ ಕಳವು ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸು, ಎಮ್ಮೆ ಮೇಯಿಸುವ ಸಂದರ್ಭದಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕಣ್ಣಿಗೆ ಕಾರದ ಪುಡಿ ಎರಚಿ, ಚಾಕು ತೋರಿಸಿ ಬಲವಂತವಾಗಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದರು. ಈ ಕುರಿತು ದಾಖಲಾಗಿದ್ದ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಲ್​ ಮೇಲೆ ಬಂದು ಕಳವು

ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಲಾಗಿದ್ದು, ಕಳ್ಳತನ ಪ್ರಕರಣ ಸಂಬಂಧ ಆರೋಪಿ ಮನೋಜ್​ ಜೈಲಿನಲ್ಲಿದ್ದಾನೆ. ಸದ್ಯ ಬಂಧಿತರ ಪೈಕಿ ಅನಿಲ್​ ಜಾಮೀನಿನ ಮೇರೆಗೆ ಹೊರ ಬಂದ್ದು, ಮತ್ತೆ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಎಸ್ಪಿ ಬಿ.ನಿಖಿಲ್​ ತಿಳಿಸಿದರು. ಪ್ರಕರಣ ಸಂಬಂಧ ವಿಶೇಷ ಅಪರಾಧ ತಂಡವನ್ನು ರಚಿಸಲಾಗಿತ್ತು. ತನಿಖಾಧಿಕಾರಿಗಳು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಎಎಎಸ್ಪಿ ಜಗದೀಶ್​, ಡಿವೈಎಸ್ಪಿ ನಾಗ್ತೆ, ವೃತ್ತ ನಿರೀಕ್ಷ ಲೋಕೇಶ್​ ಇದ್ದರು.