ನ್ಯೂಸ್

ಕೆಲಸ ಕೊಟ್ಟ ಮನೆಗೆ ಕನ್ನ ಹಾಕಿದ ಮೂವರ ಸೆರೆ

ಬೆಂಗಳೂರು: ಚಿನ್ನಾಭರಣ ಅಂಗಡಿ ಮಾಲೀಕರು ದೇವಸ್ಥಾನಕ್ಕೆ ಹೋಗಿರುವ ವಿಷಯ ತಿಳಿದು ಮನೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯನಗರ ಮಾರುತಿ ಎಕ್ಸ್‌ಟೆನ್ಶನ್‌ನ ನಿವಾಸಿ ಸನ್ಯಾಸಿಮಠದ ನಂದೀಶ್ (25), ನಂದೀಶ್ (25) ಮತ್ತು ಪ್ರತಾಪ್ ಕುಮಾರ್ (25) ಬಂಧಿತರು. ಮತ್ತೊಬ್ಬ ಹನುಮೇಗೌಡ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆಬೀಸಲಾಗಿದೆ. ಕೃತ್ಯ ನಡೆದ ಕೆಲವೇ ತಾಸಿನಲ್ಲಿ ಮೂವರನ್ನು ಬಂಧಿಸಿ 1 ಕೆ.ಜಿ. 802 ಗ್ರಾಂ ಚಿನ್ನಾಭರಣ, ವಜ್ರದ, ಬೆಳ್ಳಿ, 8 ವಾಚ್ ಸೇರಿ 1.09 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಅವೆನ್ಯೂ ರಸ್ತೆಯಲ್ಲಿ ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದ ಮನೆ ಮಾಲೀಕರು, ಇಬ್ಬರು ಮಹಿಳೆಯನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದರು. ಈ ಪೈಕಿ ಓರ್ವ ಮಹಿಳೆಯ ಪತಿ ಸನ್ಯಾಸಿ ಮಠದ ನಂದೀಶ್ ಆಗಿದ್ದು, ಇವರಿಗೆ ಮನೆಯ ಟೆರೇಸ್ ಮೇಲೆ ಇರಲು ಕೊಠಡಿ ಕೊಟ್ಟಿದ್ದರು. ಮಾಲೀಕರು ಮಂತ್ರಾಲಯಕ್ಕೆ ಹೋಗುತ್ತಾರೆ ಎಂಬ ವಿಚಾರವನ್ನು ಮನೆಗೆೆಲಸದಾಕೆ ತನ್ನ ಸ್ನೇಹಿತೆ ಬಳಿ ಹೇಳುತ್ತಿದ್ದಳು. ಈ ವಿಚಾರ ತಿಳಿದ ಸನ್ಯಾಸಿ ಮಠದ ನಂದೀಶ್, ತನ್ನ ಸ್ನೇಹಿತ ಹನುಮೇಗೌಡ ಮತ್ತು ಇತರರಿಗೆ ವಿಷಯ ಮುಟ್ಟಿಸಿದ್ದ. ಎಲ್ಲರೂ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಸೆ.21ರ ರಾತ್ರಿ ಮನೆ ಮಾಲೀಕರು ಕುಟುಂಬಸಮೇತ ಮಂತ್ರಾಲಯಕ್ಕೆ ಹೋಗಿದ್ದ ತಿಳಿದ ನಂದೀಶ್ ತನ್ನ ಸಹಚರರಿಗೆ ಮುಟ್ಟಿಸಿದ್ದ.

ಅದೇ ರಾತ್ರಿ ಹನುಮೇಗೌಡ, ತನ್ನ ಬೈಕ್‌ನಲ್ಲಿ ಇತರ ಆರೋಪಿಗಳನ್ನು ಕರೆತಂದು ಬಿಟ್ಟುಹೋಗಿದ್ದ. ಮನೆಯ 1ನೇ ಮಹಡಿಯ ಕಿಟಕಿಯ ಗ್ರಿಲ್‌ಗಳನ್ನು ಗ್ಯಾಸ್ ಕಟರ್‌ನಿಂದ ಮುರಿದು ಒಳನುಗ್ಗಿ ವಜ್ರದ ಆಭರಣಗಳು, ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು ಮತ್ತು ನಗದು ಕಳವು ಮಾಡಿದ್ದರು. ಮನೆ ಮಾಲೀಕರು ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಚ್. ವಿ. ಸುರೇಶ್ ನೇತೃತ್ವದ ತಂಡ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಸನ್ಯಾಸಿ ಮಠದ ನಂದೀಶ್‌ನ್ನು ಗುರುತು ಖಚಿತ ಪಡಿಸಿದ್ದರು.