ನ್ಯೂಸ್

ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡಿದ್ದ ಮೂವರ ಬಂಧನ

ಬೆಂಗಳೂರು: ಕ್ರೈಂ ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ನಿವಾಸಿ ರಾಕೇಶ್‌ಕುಮಾರ್(೨೬), ವಿದ್ಯಾರಣ್ಯಪುರ ನಿವಾಸಿ ಅರುಣ್ ಕುಮಾರ್(೨೭) ಹಾಗೂ ಮಾಗಡಿ ರಸ್ತೆ ನಿವಾಸಿ ಲೋಕೇಶ್‌ಕುಮಾರ್(೨೦) ಬಂಧಿತರು. ಇವರಿಂದ ಕಾರು, ದ್ವಿಚಕ್ರ ವಾಹನ ಮತ್ತು ೪ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಇತ್ತೀಚೆಗೆ ಕ್ರೈಂ ಪೊಲೀಸ್ ಸೋಗಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬನನ್ನು ಹಾಸ್ಟೆಲ್ನಿಂದ ಕರೆದೊಯ್ದಿದ್ದು ಆತನನ್ನು ಬೆದರಿಸಿ ೧.೭೦ ಲಕ್ಷ ರೂ. ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬನನ್ನು ಆತನ ಹಾಸ್ಟೆಲ್ನಿಂದ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು, ‘ನಾವು ಕ್ರೈಂ ಪೊಲೀಸ್ ಸಿಬ್ಬಂದಿ’ ಮಾದಕವಸ್ತು ಪೂರೈಕೆ ಪ್ರಕರಣವೊಂದರಲ್ಲಿ ನಿನ್ನ ಹೆಸರು ಕೇಳಿ ಬಂದಿದೆ. ನೀನು ಮಾದಕ ಪದಾರ್ಥ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಬೆದರಿಸಿದ್ದರು. ಬಳಿಕ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ನಗರದ ವಿವಿದೆಢೆ ಕಾರಿನಲ್ಲಿ ಸುತ್ತಾಡಿಸಿ ಆತನ ಎಟಿಎಂನಿಂದ ಮತ್ತು ಗೂಗಲ್‌ೇ ಮೂಲಕ ಒಟ್ಟು ೧.೭೦ ಲಕ್ಷ ರೂ.ಸುಲಿಗೆ ಮಾಡಿದ್ದರು. ನಂತರ ಈ ವಿಚಾರ ಯಾರಿಗೂ ಹೇಳದಂತೆ ಬೆದರಿಸಿ ಹಾಸ್ಟೆಲ್ ಬಳಿ ತಂದು ಬಿಟ್ಟು ಪರಾರಿಯಾಗಿದ್ದರು.

ಹಣ ಕಳೆದುಕೊಂಡ ವಿದ್ಯಾರ್ಥಿ ಸದಾಶಿವನಗರ ಠಾಣಾ ಮೆಟ್ಟಿಲೇರಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಯಶವಂತಪುರ ಠಾಣೆಯಲ್ಲಿಯೂ ಒಂದು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆ ಪ್ರಕರಣದಲ್ಲಿ ರಾತ್ರಿ ವೇಳೆ ಹೋಗುತ್ತಿದ್ದ ವಾಹನ ಸವಾರನನ್ನು ಅಡ್ಡಗಟ್ಟಿ ಪೊಲೀಸ್ ಹೆಸರಿನಲ್ಲಿ ೧೦ ಸಾವಿರ ರೂ. ಸುಲಿಗೆ ಮಾಡಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸ್ ಇನ್ಫಾರ್ಮರ್‌ಗಳಾಗಿದ್ದರು:

ಆರೋಪಿಗಳು ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದರು. ಜತೆಗೆ ಪೊಲೀಸ್ ಭಾತ್ಮೀದಾರರಾಗಿಯೂ ಕೆಲಸ ಮಾಡಿತ್ತಿದ್ದ ಇದರಿಂದ ಕೆಲ ಪೊಲೀಸ್ ಸಿಬ್ಬಂದಿಯ ಪರಿಚಯವಿದೆ. ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಆರೋಪಿಗಳು ಸಾರ್ವಜನಿಕರಿಗೆ ತಾವು ಪೊಲೀಸರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಯಾರಾದರೂ ಅಮಾಯಕರು ಸಿಕ್ಕರೆ ಅವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದರು. ಸುಮಾರು ೧೫ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳ ವಿಚಾರ ತನಿಖೆಯ ವೇಳೆ ಬಯಲಾಗಿದೆ. ಬಂಧಿತ ಆರೋಪಿಗಳ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.