ಬೆಂಗಳೂರು: ಕಾರುಗಳ ಗಾಜು ಒಡೆದು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ರಾಮ್‌ಜೀ ಗ್ಯಾಂಗ್‌ನ ಮೂವರು ಸೇರಿ ನಾಲ್ವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಚ್ಚಿ ಮೂಲದ ರಾಮ್‌ಜಿನಗರದ ಮುರುಳಿ (38), ಸೆಂಥಿಲ್ (50), ಮೂರ್ತಿ (49) ಹಾಗೂ ಕದ್ದ ವಸ್ತು ಖರೀದಿಸಿದ್ದ ಜಾನ್ಸನ್ (35) ಬಂಧಿತರು. 5.85 ಲಕ್ಷ ರೂ. ಮೌಲ್ಯದ 8 ಲ್ಯಾಪ್‌ಟಾಪ್‌ಗಳು ಸೇರಿ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇಂದಿರಾನಗರ ರಸ್ತೆಬದಿ ನಿಲ್ಲಿಸಿದ್ದ ಕಾರೊಂದರ ಗಾಜು ಒಡೆದು ಲ್ಯಾಪ್‌ಟಾಪ್ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಪರ ಕಳ್ಳರಾದ ಆರೋಪಿಗಳು ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ಸೇರಿ ದೇಶದ ವಿವಿಧ ನಗರಗಳಲ್ಲಿ ಕಾರುಗಳ ಗಾಜು ಒಡೆದು ಕಳವು ಮಾಡುತ್ತಿದ್ದರು. ನಗರದ ವಿವಿಧೆಡೆ ಸುತ್ತಾಡಿ ರಸ್ತೆಬದಿ, ಹೋಟೆಲ್, ಮಾಲ್, ಬ್ಯಾಂಕ್, ಚಿನ್ನದಂಗಡಿ ಸೇರಿ ಇತರೆಡೆ ನಿಲುಗಡೆ ಮಾಡಿದ ಕಾರುಗಳನ್ನು ಟಾರ್ಗೆಟ್ ಮಾಡಿ ರಬ್ಬರ್‌ಗೆ ಗೋಲಿ ಸಿಕ್ಕಿಸಿ ಗಾಜು ಒಡೆದು ಕೃತ್ಯ ಎಸಗುತ್ತಿದ್ದರು. ಕದ್ದ ವಸ್ತುಗಳನ್ನು ಜಾನ್ಸನ್‌ಗೆ ಮಾರಾಟ ಮಾಡಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದರು.
ರಾಮ್‌ಜಿನಗರದಿಂದ ತಂಡವಾಗಿ ನಗರಕ್ಕೆ ಬಂದು ಒಂದೇದಿನ ಐದಾರು ಕಡೆ ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಇಂದಿರಾನಗರ, ಬಾಣಸವಾಡಿ, ಬೆಳ್ಳಂದೂರು ಸೇರಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 8 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.