ಕೋಲಾರ: ಹೊರ ರಾಜ್ಯದವರಿಂದ ಹಣ ಪಡೆದು ಸರ್ಕಾರಿ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿದ್ದ ನಾಲ್ವರನ್ನು ಸಿಇಎನ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಾಲೂರು ಪಟ್ಟಣದ ಜಬ್ಬಿವುಲ್ಲಾ ಬೇಗ್ (43), ಭಾವನಹಳ್ಳಿ ಕೃಷ್ಣಾರೆಡ್ಡಿ (46), ಜೋರಿಪುರ ಮಧುಸೂದನ (37), ಬಿ.ಎಸ್ ಮಧುಸೂದನ್ (30) ಬಂಧಿತರು.
ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಕಲಿ ಸರ್ಕಾರಿ ಗುರುತಿನ ಚೀಟಿಗಳ ದುರಪಯೋಗ ಮತ್ತು ರಾಷ್ಟ್ರೀಯ ದಾಖಲೆಗಳ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ, ದಾಖಲೆಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ.
ನಕಲಿ ಆಧಾರ್ ಕಾರ್ಡ್, ಪ್ಯಾನ್ಕಾರ್ಡ್ ಮತ್ತು ಮರಣ ಪ್ರಮಾಣ ಪತ್ರ ಹಾಗೂ ಇತರ ಸರ್ಕಾರಿ ದಾಖಲೆಗಳನ್ನು ಅಕ್ರಮವಾಗಿ ತಯಾರಿಸಿ ಹೊರ ರಾಜ್ಯದವರಿಗೆ ಮತ್ತು ಅಕ್ರಮ ವಲಸಿಗರಿಂದ 10 ಸಾವಿರ ದಿಂದ 15 ಸಾವಿರ ರೂ.ಗೆ ಮಾಡಿಕೊಡುತ್ತಿದ್ದದ್ದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಆರ್. ರವಿಶಂಕರ್, ಎಚ್.ಸಿ ಜಗದೀಶ್ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಆರ್.ರಾಜೇಶ್, ಇನ್ಸ್ಪೆಕ್ಟರ್ ಎಸ್.ಆರ್.ಜಗದೀಶ್ ಮುಂದಾಳತ್ವದಲ್ಲಿ ಸಿಬ್ಬಂದಿ ಶ್ರೀ ಹಮೀದ್ಖಾನ್, ಆಲೀಫಾ, ಶ್ರೀ ಶಿವಾನಂದ, ಆನಂದ್ಕುಮಾರ್, ಅರುಣ್ಕುಮಾರ್, ಅಂಬರೀಶ, ಶಂಕರಪ್ಪ, ಮಂಜುಳಾ, ಸಂತೋಷ್, ಬಾಲಾಜಿ, ವಿನಯ್, ಪ್ರಸನ್ನ ಕುಮಾರ್, ಚಂದ್ರಿಕಾ ದಾಳಿಯಲ್ಲಿ ಪಾಲ್ಗೊಂಡಿದ್ದರು.