ಕೋಲಾರ: ತಾಲೂಕಿನ ಐಸಂದ್ರ ಮಿಟ್ಟೂರು ಗ್ರಾಮ ಸಮೀಪದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ, 96,598ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಾಂಜಂಲಿ ನಗರದ ಎಸ್.ಮೂರ್ತಿ (41) ಹಾಗೂ ವಿಜಿ ಅಲಿಯಾಸ್ ವಿಜಯ್ (44) ಬಂಧಿತರು.
ದೇಗುಲದ ಬೀಗ ಮುರಿದು ಪೂಜೆಯ ಕಳಸ, ದೀಪಸ್ಥಂಭ, ಆರತಿ ತಟ್ಟೆ, ಕರ್ಪೂರದ ತಟ್ಟೆ ಹಾಗೂ ಹುಂಡಿ ಹಣ ೧,೫೯೮ ರೂ. ಕಳುವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಉದ್ದೇಶಕ್ಕೆ ಬಡಮಾಕನಹಳ್ಳಿ ಗ್ರಾಮದ ಸಂತೆ ಮೈದಾನದ ಬಳಿ ನಿಲ್ಲಿಸಿದ್ದ ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನವನ್ನು ಕದ್ದಿದ್ದು, ಕೃತ್ಯಕ್ಕೆ ಬಳಸಿದ್ದಾರೆ.
ಕದ್ದ ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಬರುತ್ತಿದ್ದ ಆರೋಪಿಗಳು ಪೊಲೀಸರನ್ನು ಕಂಡು ಗಾಬರಿಯಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ, ಆಗ ಪೊಲೀಸರು ಆರೋಪಿಗಳನ್ನು ಹಿಡಿದು ಅವರ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಪರಿಶೀಲಿಸಿದಾಗ ಕಳ್ಳತನ ಪ್ರಕರಣ ಬಹಿರಂಗವಾಗಿದೆ. ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಆರ್.ರವಿಶಂಕರ್, ಎಚ್.ಸಿ.ಜಗದೀಶ್, ಡಿವೈಎಸ್ಪಿ ಎಚ್.ಎಂ.ನಾಗ್ತೆ ನೇತೃತ್ವದಲ್ಲಿ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸದಾನಂದ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿರುತ್ತದೆ. ಪಿಎಸ್‌ಐ ಸುಹೈಲ್ ಅಹ್ಮದ್, ಅಪರಾಧ ವಿಭಾಗದ ಮೋಹನ್, ಆರ್.ನಾರಾಯಣಸ್ವಾಮಿ, ಎಂ.ಶ್ರೀನಾಥ್ ಭಾಗವಹಿಸಿದ್ದರು.