ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಬಳಿ ಗೂಡ್ಸ್ ವಾಹನದಲ್ಲಿ ಮಂಗಳವಾರ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಬಂಧಿಸಿದ್ದಾರೆ.
ಮಳವಳ್ಳಿ ಟೌನ್ ನಿವಾಸಿ ಶಿವಕುಮಾರ್(28), ಬಸವರಾಜು (38) ಬಂಧಿತ ಆರೋಪಿಗಳು. ಇವರಿಂದ ಸುಮಾರು 25 ಮೂಟೆಯಲ್ಲಿದ್ದ 1,112 ಕೆ.ಜಿ ತೂಕದ ಪಡಿತರ ಅಕ್ಕಿ ಹಾಗೂ ಗೂಡ್ಸ್ ವಾಹನವನ್ನು ಜಪ್ತಿ ಮಾಡಲಾಗಿದೆ. ಇವರುಗಳು ಪಾಳ್ಯ ಗ್ರಾಮದ ಸುತ್ತಮುತ್ತಲ ಜನರಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಮಳವಳ್ಳಿ ಕಡೆಯ ಕಾಳಸಂತೆಗೆ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುವುದನ್ನು ಖಚಿತಪಡಿಸಿಕೊಂಡ ಆಹಾರ ನಿರೀಕ್ಷಕ ಎನ್.ಎಂ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಚೆಲುವರಾಜು ಹಾಗೂ ಸಿಬ್ಬಂದಿ ಜಂಟಿ ದಾಳಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರಿಗೆ ನೋಟಿಸ್ ಜಾರಿ ಮಾಡಿ ಬಿಡುಗಡೆ ಮಾಡಲಾಗಿದೆ.