ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಯಚೂರಿನ ದೇವದುರ್ಗ ಮೂಲದ ೫೫ ವರ್ಷದ ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಉತ್ತರಪ್ರದೇಶದ ಗೋರಖ್‌ಪುರದ ಸಚಿನ್ ಅಲಿಯಾಸ್ ಕರಣ್(೧೯) ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಸಂತ್ರಸ್ತೆಯ ಪುತ್ರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರಿನ ದೇವದುರ್ಗ ತಾಲೂಕಿನ ಸಂತ್ರಸ್ತೆ ತಮ್ಮ ನಾಲ್ವರು ಮಕ್ಕಳು ಹಾಗೂ ಮೊಮ್ಮಕ್ಕಳ ಜತೆ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಅಮೃತಹಳ್ಳಿಯ ವರದರಾಜು ಲೇಔಟ್‌ನ ಕಾರ್ಮಿಕರ ಶೆಡ್‌ನಲ್ಲಿ ವಾಸವಾಗಿದ್ದರು. ನಾಲ್ವರು ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದರೆ, ಸಂತ್ರಸ್ತೆ ಮನೆಯಲ್ಲೇ ಇರುತ್ತಿದ್ದರು. ಇನ್ನು ಆರೋಪಿ ಸಚಿನ್ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಟೈಲ್ಸ್ ಹಾಗೂ ಪೇಟಿಂಗ್ ಕೆಲಸ ಮಾಡಿಕೊಂಡು ಜಕ್ಕೂರಿನಲ್ಲಿ ವಾಸವಾಗಿದ್ದ. ಈ ಮಧ್ಯೆ ಮದ್ಯದ ಚಟ ಅಂಟಿಸಿಕೊಂಡಿದ್ದು, ಕೆಲಸ ಮುಗಿದ ಬಳಿಕ ನಿತ್ಯ ಮದ್ಯ ಸೇವಿಸುತ್ತಿದ್ದ. ಏ.೨ರಂದು ರಾತ್ರಿ ಕೆಲಸ ಮುಗಿಸಿಕೊಂಡು ಸಮೀಪದ ಬಾರ್‌ಗೆ ಹೋಗಿದ್ದ ಆರೋಪಿ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ.
ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಕೃತ್ಯ:
ಇದೇ ವೇಳೆ ಸಂತ್ರಸ್ತೆ ಕೂಡ ಬಾರ್‌ಗೆ ಹೋಗಿ ಮದ್ಯ ಸೇವಿಸಿದ್ದಾರೆ. ಅದನ್ನು ಗಮನಿಸಿದ ಆರೋಪಿ, ಬಾರ್‌ನಿಂದಲೇ ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಬಳಿಕ ವರದರಾಜು ಲೇಔಟ್‌ನ ೮ನೇ ಕ್ರಾಸ್‌ನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ರಸ್ತೆಯಲ್ಲಿ ಸಂತ್ರಸ್ತೆ ಹೋಗುವಾಗ ಆಕೆಯನ್ನು ಅಡ್ಡಗಟ್ಟಿ ಬೆದರಿಸಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದು, ಪಾನಮತ್ತಳಾಗಿದ್ದ ಸಂತ್ರಸ್ತೆ ಅಸ್ವಸ್ಥಗೊಂಡಿದ್ದಳು. ಬಳಿಕ ಆರೋಪಿ ಅಲ್ಲೇ ಇದ್ದ ಕಲ್ಲಿನಿಂದ ಆಕೆಯ ಮುಖ, ಕೆನ್ನೆ, ಗದ್ದ, ಹಣೆ, ಮರ್ಮಾಂಗ ಹಾಗೂ ದೇಹದ ಇತರೆ ಭಾಗದ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ.
೨೪ ತಾಸಿನಲ್ಲಿಯೇ ಆರೋಪಿ ಸೆರೆ:
ಮತ್ತೊಂದೆಡೆ ಇಡೀ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದರೂ ಸಂತ್ರಸ್ತೆ ಪತ್ತೆಯಾಗಿರಲಿಲ್ಲ. ಏ.೩ರಂದು ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡ ಬಳಿ ಕಾರ್ಮಿಕರು ಮಹಿಳೆಯ ಶವಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮತ್ತೊಂದೆಡೆ ಅಪರಿಚಿತ ಮಹಿಳೆ ಶವ ಪತ್ತೆಯಾದ ವಿಚಾರ ತಿಳಿದು ಸಂತ್ರಸ್ತೆ ಕುಟುಂಬ ಸದಸ್ಯರು ಬಂದಿದ್ದಾರೆ. ಆಗ ಮಹಿಳೆಯ ಶವ ಬೆತ್ತಲೆಯಾಗಿತ್ತು. ದೇಹದ ವಿವಿಧ ಭಾಗದ ಮೇಲೆ ರಕ್ತ ಗಾಯಗಳಾಗಿತ್ತು. ನಂತರ ಕುಟುಂಬ ಸದಸ್ಯರು ಮೃತರ ಗುರುತು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕೂಡಲೇ ದೂರು ಪಡೆದು ಕಾರ್ಯಾಚರಣೆ ನಡೆಸಿ ಘಟನೆ ನಡೆದ ೨೪ ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ.