ನ್ಯೂಸ್

ಅಪಹರಣದ ನಾಟಕವಾಡಿದ ಆರೋಪಿಗಳ ಸೆರೆ

ಬೆಂಗಳೂರು : ಆನ್‌ಲೈನ್ ಜೂಜಾಟದ ಗೀಳಿಗೆ ಬಿದ್ದಿದ್ದ ಕಾಲೇಜಿನ ವಾರ್ಡ್‌ನ್‌ವೊಬ್ಬ ಅಪಹರಣದ ನಾಟಕವಾಡಿ ಚಿಕ್ಕಮ್ಮನಿಂದಲೇ ಸಾವಿರಾರೂ ಸುಲಿಗೆ ಮಾಡಿ ಇದೀಗ ತನ್ನ ಸಹಚರರೊಂದಿಗೆ ಪೊಲೀಸರ ಅತಿಥಿಯಾಗಿದ್ದಾನೆ.

ಹಾಸನ ಮೂಲದ ಜೀವನ್(೨೯) ಮತ್ತು ಆತನ ಸ್ನೇಹಿತರಾದ ವಿನಯ್(೨೭), ಪೂರ್ಣೇಶ್ ಅಲಿಯಾಸ್ ಪ್ರೀತಮ್(೨೮), ರಾಜು(೨೮) ಬಂಧಿತರು.

ಆರೋಪಿ ಜೀವನ್ ಚಿಕ್ಕಮ್ಮ ಸುನಂದ ಎಂಬುವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಕೇವಲ ಐದಾರು ಗಂಟೆಯಲ್ಲೇ ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಸುನಂದ ಬೊಮ್ಮನಹಳ್ಳಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಅಪಹರಣದ ಕಥೆ ಕಟ್ಟಿದ ಆರೋಪಿ ಜೀವನ್, ಡಿಪ್ಲೋಮಾ ಇನ್ ವಾರ್ಡನ್ ವ್ಯಾಸಂಗ ಮಾಡಿದ್ದರಿಂದ ತಮ್ಮ ಕಾಲೇಜಿನಲ್ಲಿಯೇ ಆತನಿಗೆ ವಾರ್ಡನ್ ಕೆಲಸ ಕೊಡಿಸಿದ್ದರು. ಅಲ್ಲದೆ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು. ಈ ಮಧ್ಯೆ ಆರೋಪಿ ಆನ್‌ಲೈನ್ ಜೂಜಾಟ ಹಾಗೂ ಗೇಮಿಂಗ್ ಹಾಗೂ ಇತರೆ ದುಷ್ಚಟಗಳ ದಾಸನಾಗಿದ್ದು. ಸಂಬಳದ ಹಣವನ್ನು ಆನ್ ಜೂಜಾಟಕ್ಕೆ ಹೂಡಿಕೆ ಮಾಡಿ ನಷ್ಟ ಹೊಂದಿದ್ದ. ಜತೆಗೆ ಸ್ನೇಹಿತರ ಬಳಿಯು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಚಿಕ್ಕಮ್ಮ ಜೀವನ್‌ಗೆ ಎಚ್ಚರಿಕೆ ನೀಡಿದ್ದರು. ಆದರೂ ಆರೋಪಿ ತನ್ನ ದುಷ್ಚಟಗಳಿಂದ ದೂರವಾಗಿರಲಿಲ್ಲ. ಆರೋಪಿ ಜೀವನ್, ಮಾದೇವ ಬುಕ್ಕಿ (ಗೋಲ್ಡ್-೩೬೯) ಎಂಬ ಆನ್‌ಲೈನ್ ಜೂಜಾಟದಲ್ಲಿ ಲಕ್ಷಾಂತರ ರೂ. ಕಳೆದುಕೊಂಡಿದ್ದ. ಮಾ.೧೧ರಂದು, ಚಿಕ್ಕಮ್ಮ ಸುನಂದಗೆ, ಸಾಲದ ಹಣ ಕೊಡದಕ್ಕೆ ಕೆಲವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿ ಮನೆಯಲ್ಲಿದ್ದ ೩೭ ಸಾವಿರ ರೂ. ಪಡೆದುಕೊಂಡು ಹೋಗಿದ್ದ. ಈ ಹಣವನ್ನು ಆನ್‌ಲೈನ್ ಜೂಜಾಟದಲ್ಲಿ ಕಳೆದಿದ್ದ.

ಟೊಮ್ಯಾಟೋ ಸಾಸ್ ಚಿಲ್ಲಿಕೊಂಡು ನಾಟಕ:
ಮತ್ತೆ ಜೂಜು ಆಡಲು ಹಣ ಬೇಕಾಗಿದ್ದರಿಂದ ತನ್ನ ಸ್ನೇಹಿತರನ್ನು ಬೊಮ್ಮನಹಳ್ಳಿಯಲ್ಲಿರುವ ಬಾರ್‌ವೊಂದಕ್ಕೆ ಕರೆಸಿಕೊಂಡಿದ್ದ. ಬಳಿಕ ನಾಲ್ವರು ಆರೋಪಿಗಳು ಅಪಹರಣದ ಸಂಚು ರೂಪಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಕೋಣೆಯೊಂದರಲ್ಲಿ ಕೆಲವರು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಲು, ತನ್ನ ತಲೆಯ ಮೇಲೆ ಟೊಮ್ಯಾಟೋ ಸಾಸ್ ಚಿಲ್ಲಿಕೊಂಡು ಚಿಕ್ಕಮ್ಮನಿಗೆ ಫೋಟೋ ಕಳುಹಿಸಿದ್ದ. ಬಳಿಕ ಆತನ ಸ್ನೇಹಿತರ ಮೂಲಕ ಕರೆ ಮಾಡಿಸಿ, ಕೂಡಲೇ ೧ ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಜೀವನ್ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿಸಿದ್ದ. ಇದರಿಂದ ಹೆದರಿದ ಚಿಕ್ಕಮ್ಮ, ಜೀವನ್‌ನ ಫೋನ್‌ಪೇ ಖಾತೆಗೆ ೨೦ ಸಾವಿರ ರೂ.ವರ್ಗಾಹಿಸಿದ್ದರು. ಮತ್ತೊಂದೆಡೆ ಕೂಡಲೇ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆನೇಕಲ್ ತಾಲೂಕಿನ ಜಿಗಣಿ ಬಳಿಯ ಎಸ್.ಬಿಂಗೀಪುರ ಗ್ರಾಮದ ಕೋಣೆಯೊಂದರಲ್ಲಿ ಮದ್ಯದ ಪಾರ್ಟಿ ಮಾಡುವಾಗ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಆನ್‌ಲೈನ್ ಜೂಜಾಟಕ್ಕೆ ಹಣ ಹೂಡಿಕೆ ಮಾಡಲು ಅಪಹರಣದ ನಾಟಕವಾಡಿದ್ದರು ಎಂಬುದು ಗೊತ್ತಾಗಿದೆ. ಇನ್ನು ಆರೋಪಿಗಳ ಪೈಕಿ ಜೀವನ್ ಕಾಲೇಜಿನಲ್ಲಿ ವಾರ್ಡನ್ ಆಗಿದ್ದರೆ, ಪ್ರೀತಮ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವಿನಯ್ ಮತ್ತು ರಾಜು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.