ಬೆಂಗಳೂರು: ಪತ್ನಿಯ ಮೊಬೈಲ್ ನಂಬರ್ ಕೇಳಿದ್ದರಿಂದ ಕೋಪಗೊಂಡು ಮೂವರಿಗೆ ಚಾಕುವಿನಿಂದ ಚುಚ್ಚಿದ್ದ ರೌಡಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಯ್ಸಳನಗರದ ನಿವಾಸಿ ಕೆಂಪೇಗೌಡ ಅಲಿಯಾಸ್ ಕೆಂಪಣ್ಣ(೪೪) ಬಂಧಿತ ರೌಡಿ.
ಈತನಿಂದ ಇರಿತಕ್ಕೊಳಗಾದ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾರದ ಹಿಂದೆ ಕೆಂಪೇಗೌಡದ ಸಂಬಂಧಿಯಾದ ರಮೇಶ್, ಆತನ ಹೆಂಡತಿಯ ಬಳಿ ನಿನ್ನ ನಂಬರ್ ಕೊಡು ಎಂದು ಕೇಳಿರುತ್ತಾನೆ. ಈ ವಿಷಯವನ್ನು ಆಕೆ ಕೆಂಪೇಗೌಡನಿಗೆ ತಿಳಿಸಿರುತ್ತಾಳೆ. ಇದನ್ನು ಮನಸ್ಸಿನಲ್ಲಿಟ್ಟಿಕೊಂಡಿದ್ದ ರೌಡಿ ಕೆಂಪೇಗೌಡ ಸೆ. ೧೨ರಂದು ರಮೇಶನನ್ನು ಮದ್ಯಸೇವಿಸಲು ಕರೆದಿದ್ದ. ಮದ್ಯದ ಅಮಲಿನಲ್ಲಿ ಕೆಂಪೇಗೌಡನಿಗೆ ಆ ವಿಷಯ ಪ್ರಸ್ತಾಪಿಸಿ ನನ್ನ ಪತ್ನಿಯ ಮೊಬೈಲ್ ನಂಬರ್ ಕೊಡು ಯಾಕೋ ಅವಳ ಬಳಿ ಕೇಳ್ದೆ ಎಂದು ರಮೇಶ ಹೊಡೆದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ರಮೇಶ ತನ್ನ ಸಂಬಂಧಿಯಾದ ಕೃಷ್ಣಮೂರ್ತಿಗೆ ಹಲ್ಲೆಯ ವಿಷಯ ಹೇಳಿದ್ದಾನೆ. ಆತ ಸಹಚರರನ್ನು ಕರೆದುಕೊಂಡು ಹೊಯ್ಸಳ ನಗರದಲ್ಲಿರುವ ಕೆಂಪೇಗೌಡನ ಮನೆ ಬಳಿ ಹೋಗಿ ಜಗಳವಾಡಿದಾಗ, ಕೆಂಪೇಗೌಡ ಚಾಕು ತೆಗೆದುಕೊಂಡು ಬಂದು ರಮೇಶ್ ಸೇರಿ ಇತರರಿಗೆ ಚುಚ್ಚಿದ್ದಾನೆ. ಆ ವೇಳೆ ರಮೇಶನ ಸಹಚರರು ಕೆಂಪೇಗೌಡನ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ, ಗಾಜುಗಳನ್ನು ಹೊಡೆದು ಬಾಗಿಲು ಮುರಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇರಿತಕ್ಕೊಳಗಾದ ರಮೇಶ ಸೇರಿ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚಂದ್ರಾಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ರೌಡಿ ಕೆಂಪೇಗೌಡನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.