ನ್ಯೂಸ್

ನಂಬರ್ ಪ್ಲೇಟ್ ಮುಚ್ಚಿದ್ದ ಶಾಲಾ ಬಸ್ ಚಾಲಕನ ಸೆರೆ

ಬೆಂಗಳೂರು: ವಾಹನದ ನೋಂದಣಿ ಸಂಖ್ಯೆ ಮರೆಮಾಚಿಕೊಂಡು ಓಡಾಡುತ್ತಿದ್ದ ಖಾಸಗಿ ಶಾಲಾ ವಾಹನದ ಚಾಲಕನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿ ನ.೩೦ರಂದು ಸಂಜೆ ೫.೪೫ರ ಸುಮಾರಿಗೆ ನೋಂದಣಿ ಸಂಖ್ಯೆ ಮರೆಮಾಚಿಕೊಂಡು ಖಾಸಗಿ ಶಾಲಾ ವಾಹನವೊಂದು ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ನಗರ ಸಂಚಾರ ವಿಭಾಗದ ಎಕ್ಸ್ ಖಾತೆಗೆ ವಾಹನದ ಫೋಟೋ ಸಹಿತ ಟ್ಯಾಗ್ ಮಾಡಿದ್ದರು. ಈ ಮಾಹಿತಿ ಮೇರೆಗೆ ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆ ಖಾಸಗಿ ಶಾಲಾ ವಾಹನ ಪತ್ತೆ ಹಚ್ಚಿ ಚಾಲಕನನ್ನು ವಶಕ್ಕೆ ಪಡೆದು ವೈಟ್‌ಫೀಲ್ಡ್ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲಾ ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.