ನ್ಯೂಸ್

ಮೊಬೈಲ್ ಕಳ್ಳನ ಸೆರೆ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕನ ಸೋಗಿನಲ್ಲಿ ತೆರಳಿ ಮೊಬೈಲ್ ಕಳವು ಮಾಡುತ್ತಿದ್ದವನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಎನ್. ರವಿತೇಜ ಬಂಧಿತ. 10 ಲಕ್ಷ ರೂ. ಮೌಲ್ಯದ 60 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಸ್‌ಗಳಲ್ಲಿ ಸರಣಿ ಮೊಬೈಲ್ ಕಳ್ಳತನ ದೂರುಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ಠಾಣಾ ಸರಹದ್ದಿನ ಬಸ್ ನಿಲ್ದಾಣಗಳಲ್ಲಿ ಮಫ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಕೋನಪ್ಪನ ಅಗ್ರಹಾರ ಬಸ್‌ನಿಲ್ದಾಣದಲ್ಲಿ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಶಂಕಾಸ್ಪದವಾಗಿ ಓಡಾಡುತ್ತಿದ್ದ ರವಿತೇಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿತೇಜ ಆಂಧ್ರಪ್ರದೇಶದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಬೆಂಗಳೂರಿನಲ್ಲಿ ಸುಲಭವಾಗಿ ಮೊಬೈಲ್ ಕಳವು ಮಾಡಿ ಹಣ ಸಂಪಾದಿಸಬಹುದು ಎಂದು ಪರಿಚಯಸ್ಥರು ಸಲಹೆ ನೀಡಿದ್ದರಂತೆ. ನಗರಕ್ಕೆ ಬಂದು ಬಸ್‌ಗಳಲ್ಲಿ ಪ್ರಯಾಣಿಕನಂತೆ ತೆರಳಿ ಜನರಿಂದ ಮೊಬೈಲ್ ಕಳವು ಮಾಡುತ್ತಿದ್ದ. ಕದ್ದ ಮೊಬೈಲ್‌ಗಳನ್ನು ಸೆಕೆಂಡ್ಸ್‌ನಲ್ಲಿ ಮಾರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.