ನ್ಯೂಸ್

ಶಾಸಕ ಮುನಿರತ್ನ ಬಂಧನ

ಮಂಜುನಾಥ.ಕೆ

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರ ಮತ್ತು ಬಿಬಿಎಂಪಿ ಮಾಜಿ ಸದಸ್ಯನಿಗೆ ಜೀವ ಬೆದರಿಕೆ, ಜಾತಿ ನಿಂದನೆ, ಹಣ ಸುಲಿಗೆ ಹಾಗೂ ವಂಚನೆ ಆರೋಪದಡಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರನ್ನು ಬೆಂಳೂರಿನ ವೈಯ್ಯಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುತ್ತಿಗೆದಾರ ಚೆಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯಕರ್ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಪ್ರತ್ಯೇಕ ದೂರು ನೀಡಿದ್ದರು. ಎರಡು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಲಾರದ ನಿಂಗಲಿ ಬಳಿ ಮುನಿರತ್ನ ಅವರನ್ನು ಬಂಧಿಸಿದ್ದಾರೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಬಂಧನ ಭೀತಿಯಿಂದ ಮುನಿರತ್ನ ಶನಿವಾರ ಮಧ್ಯಾಹ್ನವೇ ನಗರ ತೊರೆದು ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶದ ಚಿತ್ತೂರು ಕಡೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಮೊಬೈಲ್ ಲೋಕೇಷನ್ ಆಧರಿಸಿ ಕ್ಷೀಪ್ರ ಕಾರ್ಯಚರಣೆ ನಡೆಸಿದ ಪೊಲೀಸರು, ಕೋಲಾರದ ನಿಂಗಲಿ ಬಳಿ ಶಾಸಕರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ.
ಎರಡು ಎ್ಐಆರ್ ದಾಖಲು:
ಗುತ್ತಿಗೆದಾರ ಚೆಲುವರಾಜು, ಶಾಸಕ ಮುನಿರತ್ನ ವಿರುದ್ಧ ಲಂಚಕ್ಕೆ ಬೇಡಿಕೆ, ಪ್ರಾಣ ಬೆದರಿಕೆ ಆರೋಪ ಕುರಿತು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಬಳಿಕ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆ ಕೋರಿದ್ದರು. ಈ ಬೆನ್ನಲ್ಲೇ ಚೆಲುವರಾಜು ಅವರಿಂದ ದೂರು ಸ್ವೀಕರಿಸಿದ ವೈಯಾಲಿಕಾವಲ್ ಠಾಣೆ ಪೊಲೀಸರು ಶಾಸಕ ಮುನಿರತ್ನ, ಅವರ ಗನ್ ಮ್ಯಾನ್ ವಿಜಯಕುಮಾರ್, ಶಾಸಕರ ಕಾರ್ಯದರ್ಶಿ ಅಭಿಷೇಕ್ ಹಾಗೂ ವಸಂತ್ ಕುಮಾರ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಚೆಲುವರಾಜು ಮೂಲಕ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯಕರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪ ಸಂಬಂಧ ವೇಲುನಾಯಕರ್ ಕೂಡ ಪ್ರತ್ಯೇಕ ದೂರು ನೀಡಿದ್ದು, ಈ ಸಂಬಂಧವೂ ಶಾಸಕರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.