ನ್ಯೂಸ್

ಮೋದಿ, ಬಿಎಸ್‌ವೈಗೆ ಜಾಲತಾಣದಲ್ಲಿ ಅವಹೇಳನ ಮಾಡಿದ ಜೆಡಿಎಸ್ ಮುಖಂಡನ ಬಂಧನ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇಲೆ ಜೆಡಿಎಸ್ ಮುಖಂಡನೊಬ್ಬನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಚರಣ್ ಗೌಡ ಬಂಧಿತ. ಗಣ್ಯರ ಕುರಿತು ನಿಂದಿಸಿದ ಆರೋಪದ ಮೇಲೆ ಮಾಜಿ ಶಾಸಕ ಎಸ್. ಮುನಿರಾಜು, ಲಕ್ಷ್ಮೀಪುರದ ಚಿಕ್ಕಬೈಲಪ್ಪ ಮತ್ತು ದಾಸರಹಳ್ಳಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಆರ್. ಸತೀಶ್ ಎಂಬುವರು ಪ್ರತ್ಯೇಕ ದೂರು ನೀಡಿದ್ದರು. ಈ ದೂರುಗಳ ಆಧಾರದ ಮೇಲೆ ಆರೋಪಿ ಚರಣ್ ಗೌಡನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಎಚ್‌ಡಿಕೆ ಗಜಪಡೆ ಎಂಬ ಖಾತೆ ತೆರೆದು ಬಿಎಸ್‌ವೈ, ಸಂಸದೆ ಶೋಭಾ ಕರಂದ್ಲಾಜೆ ಫೋಟೋ ಮಾರ್ಫಿಂಗ್ ಮಾಡಿ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದ್ದಾನೆ ಎಂದು ಆರೋಪಿಸಲಾಗಿದೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಮುನಿರಾಜು ವಿರುದ್ಧವೂ ಇಲ್ಲಸಲ್ಲದ ಆರೋಪ ಮಾಡಿ ನಿಂದನೆ ಮಾಡಿ ಅವರ ತೇಜೋವಧೆ ಮಾಡುವಂತಹ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದರು.

ಈ ಎಲ್ಲದರ ಬಗ್ಗೆ ದೂರುಗಳು ಬಂದಿದ್ದವು. ಅದಕ್ಕಾಗಿ ಪ್ರತ್ಯೇಕ ಎ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.