ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ಕುಡುಕ ಪತಿಯೊಬ್ಬ ಪತ್ನಿಯನ್ನು ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ.
ರಂಗನಾಥಪುರ ನಿವಾಸಿ ನೇತ್ರಾವತಿ (೩೨) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಪತಿ ವೆಂಕಟೇಶ್(೩೫)ನನ್ನು ಬಂಧಿಸಲಾಗಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಮೂಲದ ವೆಂಕಟೇಶ್ ಮತ್ತು ನೇತ್ರಾವತಿ ೧೦ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ೯ ವರ್ಷದ ಮಗ ಇದ್ದಾನೆ. ಕಾಮಾಕ್ಷಿಪಾಳ್ಯದ ರಂಗನಾಥಪುರದ ಬಾಡಿಗೆ ಮನೆಯಲ್ಲೇ ವಾಸವಾಗಿದ್ದರು. ವೆಂಕಟೇಶ್ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರೆ, ನೇತ್ರಾವತಿ ಗೃಹಿಣಿಯಾಗಿದ್ದರು. ಅವರ ಪುತ್ರ ಖಾಸಗಿ ಶಾಲೆಯಲ್ಲಿ ೪ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ವೆಂಕಟೇಶ್ ಮದ್ಯ ವ್ಯಸನಿಯಾಗಿದ್ದು, ನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಅನಗತ್ಯವಾಗಿ ಜಗಳ ತೆಗೆದು ಪತ್ನಿಗೆ ಹೊಡೆಯುತ್ತಿದ್ದ. ಈ ವಿಚಾರವನ್ನು ತನ್ನ ಮನೆಯವರಿಗೂ ನೇತ್ರಾವತಿ ತಿಳಿಸಿದ್ದಳು. ಬಳಿಕ ಹಿರಿಯರ ಸಮ್ಮುಖದಲ್ಲಿ ಗಂಡ-ಹೆಂಡತಿಗೆ ಬುದ್ದಿವಾದ ಹೇಳಿ ರಾಜಿ-ಸಂಧಾನ ಮಾಡಲಾಗಿತ್ತು. ಈ ವೇಳೆ ಆರೋಪಿ, ಮತ್ತೊಮ್ಮೆ ಕುಡಿಯುವುದಿಲ್ಲ ಹೇಳಿದ್ದ. ಆದರೆ, ಕೆಲ ದಿನಗಳ ಬಳಿಕ ಮತ್ತೆ ಕುಡಿಯಲು ಆರಂಭಿಸಿದ್ದ. ಶನಿವಾರ ಬೆಳಗ್ಗೆ ಕೂಡ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ, ರಾತ್ರಿ ಮತ್ತೊಮ್ಮೆ ಕಂಠಪೂರ್ತಿ ಕುಡಿದು ಬಂದು ಪತ್ನಿ ಜತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಅದನ್ನು ಕಂಡ ಸ್ಥಳೀಯರು ಜಗಳ ಬಿಡಿಸಿದ್ದಾರೆ. ನಂತರ ನೇತ್ರಾವತಿ ಪುತ್ರನನ್ನು ಕೋಣೆಗೆ ಕರೆದೊಯ್ದು ಮಲಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹದ ಪಕ್ಕದಲ್ಲೇ ಮಲಗಿದ್ದ ಆರೋಪಿ:
ಆ ನಂತರ ತಡರಾತ್ರಿ ೧೨ಗಂಟೆ ಸುಮಾರಿಗೆ ಕೋಣೆಗೆ ಹೋದ ಆರೋಪಿ, ತಾಯಿ ಜತೆ ಮಲಗಿದ್ದ ಮಗನನ್ನು ಬೇರೆಡೆ ಮಲಗಿಸಿದ್ದಾನೆ. ಬಳಿಕ ಸೀರೆಯಿಂದ ಪತ್ನಿ ನೇತ್ರಾವತಿ ಕುತ್ತಿಗೆ ಬಿಗಿದು ಕೊಲೆಗೈದು, ಮದ್ಯದ ನಶೆಯಲ್ಲಿ ಮುಂಜಾನೆವರೆಗೂ ಮೃತದೇಹದ ಪಕ್ಕದಲ್ಲೇ ಮಲಗಿದ್ದ. ನಂತರ ಬೆಳಗ್ಗೆ ೭ ಗಂಟೆ ಎಚ್ಚರಗೊಂಡ ಪುತ್ರ ತಾಯಿಯನ್ನು ಎಚ್ಚರಿಸಲು ಮುಂದಾದಾಗ ಆಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮಗ ಜೋರಾಗಿ ಅಳಲು ಆರಂಭಿಸಿದ್ದಾನೆ. ಆತನ ಅಳು ಕೇಳಿಸಿಕೊಂಡ ಅಕ್ಕ-ಪಕ್ಕದ ಮನೆಯವರು ಮನೆಗೆ ಬಂದಾಗ ಕೊಲೆಯಾಗಿರುವುದು ಗೊತ್ತಾಗಿದ್ದು, ಸ್ಥಳೀಯರೇ ನೇತ್ರಾವತಿಯ ಸಂಬಂಧಿಯೊಬ್ಬರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆ ಸಂಬಂಧಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.