ಕೋಲಾರ: ನಗರದ ರಹಮತ್ ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಗಳನ್ನು ಗಲ್ಪೇಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಗಳಾದ ಸೈಯದ್ ನಿಜಾಮುದ್ದೀನ್ (30), ಮುಜಾಮಿಲ್ (30), ರಹಮತ್ ನಗರದ ಕುತುಬ್ಪಾಷಾ (26), ಶಹಿನ್ ಷಾ ನಗರದ ಇಮ್ರಾನ್ (37) ಬಂಧಿತರು.
ರಹಮತ್ ನಗರದಲ್ಲಿ ಯುವಕರು ಗುಂಪು ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದರು. ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದು ಕಂಡು ಬಂದಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಮುಜಾಮಿಲ್ನನ್ನು ವಿಚಾರಿಸಿದಾಗ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ 1 ಮೊಬೈಲ್ ಹಾಗೂ 3,400 ರೂ. ವಶಕ್ಕೆ ಪಡೆದಿದ್ದು, ಗಲ್ಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.