ನ್ಯೂಸ್

ಮದ್ಯದ ಅಮಲಿನಲ್ಲಿ ಸ್ನೇಹಿತನನ್ನೆ ಕೊಂದಿದ್ದ ಐವರ ಸೆರೆ

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಫುಡ್ ಡೆಲಿವರಿ ಬಾಯ್‌ನನ್ನು ಹತ್ಯೆ ಮಾಡಿದ್ದ ಐವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

ದೊಮ್ಮಲೂರಿನ ಎಸ್.ಸಂತೋಷ್(೩೬), ಇಂದಿರಾನಗರದ ಎಂ.ಪವನ್ ಕುಮಾರ್ (೨೬), ತಿಪ್ಪಸಂದ್ರ ರಂಜಿತ್ ಕುಮಾರ್ (೩೩), ದೊಮ್ಮಲೂರು ಲೇಔಟ್ ನಿವಾಸಿ ಜೆ.ವಿನೋದ್ ಮ್ಯಾಥ್ಯೂವ್(೩೫) ಮತ್ತು ರಂಗನಾಥ್(೪೧) ಬಂಧಿತರು. ಏ.೧೮ರಂದು ರಾತ್ರಿ ಫುಡ್ ಡೆಲಿವರಿ ಬಾಯ್‌ಯಾಗಿದ್ದ ಶಿವಾಜಿನಗರ ನಿವಾಸಿ ಸತೀಶ್ ಕುಮಾರ್ ಮದ್ಯದ ಅಮಲಿನಲ್ಲಿ ಆರೋಪಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಅದರಿಂದ ಆಕ್ರೋಶಗೊಂಡ ಆರೋಪಿಗಳು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಹಾಗೂ ಸತೀಶ್ ಕುಮಾರ್ ಪರಸ್ಪರ ಸ್ನೇಹಿತರಾಗಿದ್ದಾರೆ. ಏ.೧೯ರಂದು ಸತೀಶ್ ಕುಮಾರ್ ಶಿವಾಜಿನಗರದಿಂದ ದೊಮ್ಮಲೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾನೆ. ಅದೇ ಕಾರ್ಯಕ್ರಮದಲ್ಲಿ ಆರೋಪಿಗಳು ಇದ್ದರು. ಈ ವೇಳೆ ಹಳೇ ಸ್ನೇಹಿತರೆಲ್ಲಾ ಒಟ್ಟಾಗಿ ಸಿಕ್ಕಿದ್ದಾರೆ. ಹೀಗಾಗಿ ಎಲ್ಲರೂ ಒಟ್ಟಾಗಿ ಮದ್ಯ ಸೇವಿಸಲು ದೊಮ್ಮಲೂರಿನ ಬಿಡಿಎ ಪಾರ್ಕ್ ಬಳಿ ಹೋಗಿದ್ದಾರೆ. ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಆಗ ಸತೀಶ್ ಕುಮಾರ್, ಸಂತೋಷ್ ಮತ್ತು ಪವನ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಎಲ್ಲರನ್ನು ಎಳೆದಾಡಿದ್ದ. ಈ ಹಿಂದೆಯೂ ಇದೇ ರೀತಿ ಸತೀಶ್ ಮದ್ಯದ ಅಮಲಿನಲ್ಲಿ ಜಗಳ ಮಾಡಿದ್ದ. ಅದರಿಂದ ಆಕ್ರೋಶಗೊಂಡ ಸಂತೋಷ್, ಪವನ್ ಹಾಗೂ ಇತರರು ಸತೀಶ್ ಕುಮಾರ್ ಮೇಲೆ ಹಲ್ಲೆ ನಡೆಸಿ ಸಿಮೆಂಟ್ ಇಟ್ಟಿಗೆಯನ್ನು ಆತನ ತಲೆಮೇಲೆ ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮದ್ಯ ಪಾರ್ಟಿ ಮಾಡಿದಾಗಲೆಲ್ಲ ಸತೀಶ್ ಕುಮಾರ್, ಆರೋಪಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಅದರಿಂದ ಆಕ್ರೋಶಗೊಂಡು ಆರೋಪಿಗಳು ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.