ನ್ಯೂಸ್

100 ಕೋಟಿ ಕಪ್ಪು ಹಣವಿದೆಯೆಂದು ವಂಚಿಸುತ್ತಿದ್ದ ಐವರ ಸೆರೆ: 30 ಕೋಟಿ ರೂ.ಮೊತ್ತದ ನಕಲಿ ನೋಟು ಜಪ್ತಿ

ಬೆಂಗಳೂರು: ತಮ್ಮ ಬಳಿ ೧೦೦ ಕೋಟಿ ರೂ.ಕಪ್ಪು ಹಣವಿದ್ದು ೪೦ ಲಕ್ಷ ರೂ.ಕೊಟ್ಟರೆ ೧ ಕೋಟಿ ರೂ. ಕೊಡುವುದಾಗಿ ನಂಬಿಸಿ, ಖೋಟಾ ನೋಟುಗಳನ್ನು ತೋರಿಸಿ ಜನರನ್ನು ವಂಚಿಸುತ್ತಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೩೦.೯೧ ಕೋಟಿ ರೂ.ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಸುಧೀರ್, ಕಿಶೋರ್, ತೀರ್ಥ ರಿಷಿ, ವಿನಯ್ ಹಾಗೂ ಚಂದ್ರಶೇಖರ್ ಬಂಧಿತರು. ತಮ್ಮದೇ ಜಾಲ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಟ್ರಸ್ಟ್ ಹಾಗೂ ಸಂಸ್ಥೆಗಳ ಸದಸ್ಯರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು. ಟ್ರಸ್ಟ್ ಸದಸ್ಯರೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಿ ಸುಧೀರ್ ವಿರುದ್ಧ ಬಸವನಗುಡಿ ಹಾಗೂ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಈ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು. ಪ್ರಮುಖ ಆರೋಪಿ ಎನ್ನಲಾದ ಕಿಶೋರ್ ವಿರುದ್ಧ ಮುಂಬೈನಲ್ಲಿ ಪ್ರಕರಣಗಳಿವೆ. ಅಲ್ಲಿಯೇ ಈತ, ನಕಲಿ ನೋಟುಗಳನ್ನು ಬಳಸಿ ಜನರನ್ನು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಿದೆ.
ರೈಸ್ ಫುಲ್ಲಿಂಗ್, ಹವಾಲಾ ಸೇರಿ ಹಲವು ದಂಧೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದ ಬಗ್ಗೆ ಮಾಹಿತಿ ಇದೆ. ಆರೋಪಿಗಳಿಂದ ಯಾರಿಗಾದರೂ ವಂಚನೆ ಆಗಿದ್ದರೆ, ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ಮನವಿ ಮಾಡಿದರು.

ದುಪ್ಪಟ್ಟು ಹಣ ಕೊಡುವುದಾಗಿ ಧೋಖಾ:
ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು, ಪ್ರತಿಷ್ಠಿತ ಕಂಪನಿಗಳಿಗೆ ಸೇರಿದ್ದ ೧೦೦ ಕೋಟಿ ಕಪ್ಪು ಹಣ ನಗದು ರೂಪದಲ್ಲಿ ನಮ್ಮ ಬಳಿ ಇದೆ. ಇದನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ನೇರವಾಗಿ ನಿಮಗೆ ಕೊಡುತ್ತೇವೆ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ವ್ಯವಹಾರದ ಬಗ್ಗೆ ಮಾತುಕತೆ ಮುಂದುವರಿಸಿದ್ದರು. ಕಂಪನಿಯ ಸಿಎಸ್‌ಆರ್ ದೇಣಿಗೆ ಹೆಸರಿನಲ್ಲಿ ನಿಮಗೆ ೧ ಕೋಟಿ ನಗದು ಕೊಡುತ್ತೇವೆ. ಅದಕ್ಕೆ ಪ್ರತಿಯಾಗಿ ನೀವು ೪೦ ಲಕ್ಷ ನೀಡಬೇಕು. ಈ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಲು ನಮಗೆ ಶೇ ೧೦ರಷ್ಟು ಕಮಿಷನ್ ಕೊಡಬೇಕು ಎಂದು ಆರೋಪಿಗಳು ಹೇಳಿದ್ದರು. ಅದಕ್ಕೂ ದೂರುದಾರ ಒಪ್ಪಿದ್ದರು ಎಂದು ತಿಳಿಸಿದರು.

ಕಂತೆ ಕಂತೆ ನೋಟುಗಳ ಪ್ರದರ್ಶನ:
ದೂರುದಾರರಿಗೆ ವಿಡಿಯೊ ಕರೆ ಮಾಡಿದ್ದ ಆರೋಪಿಗಳು, ನಕಲಿ ನೋಟುಗಳ ಕಂತೆ ತೋರಿಸಿದ್ದರು. ಅಸಲಿ ನೋಟುಗಳೆಂದು ಹೇಳಿ ನಂಬಿಸಿದ್ದರು. ಆದರೆ ಆರೋಪಿಗಳ ವರ್ತನೆಯಿಂದ ಅನುಮಾನಗೊಂಡಿದ್ದ ದೂರುದಾರ, ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಸಿಸಿಬಿಯ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ೩೦.೯೧ ಕೋಟಿ ಮೊತ್ತದ ನಕಲಿ ನೋಟುಗಳನ್ನು ಜಪ್ತಿ ಮಾಡಿದೆ. ಇದರಲ್ಲಿ ೫೦೦ ಹಾಗೂ ೨,೦೦೦ ರೂ. ಮುಖಬೆಲೆಯ ನೋಟುಗಳಿವೆ. ಇವುಗಳನ್ನು ಎಲ್ಲಿ ಮುದ್ರಿಸಲಾಗಿತ್ತು ಎಂಬುದರ ಬಗ್ಗೆ ತಿಳಿಯಲು ತನಿಖೆ ಮುಂದುವರಿಸಲಾಗಿದೆ ಎಂದು ವಿವರಿಸಿದರು.

೨೩.೪೯ ಲಕ್ಷ ನಗದು ಜಪ್ತಿ:
ಆರೋಪಿಯೊಬ್ಬನ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಿ, ಶೋಧ ನಡೆಸಲಾಯಿತು. ಈತನ ಮನೆಯಲ್ಲಿ ೨೩.೪೯ ಲಕ್ಷ ರೂ.ನಗದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಈ ವಶಪಡಿಸಿಕೊಂಡ ಹಣವು ಸಾರ್ವಜನಿಕರಿಂದ ಮೋಸ ಮಾಡಿ ಪಡೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು.