ಬೆಂಗಳೂರು: ಬಸವೇಶ್ವರ ನಗರ ಸಮೀಪದ ಮಂಜುನಾಥ ನಗರದಲ್ಲಿ ನಡೆದ ಪದವಿ ವಿದ್ಯಾರ್ಥಿಯ ಶಂಕಾಸ್ಪದ ಸಾವು ಪ್ರಕರಣ ಕೊಲೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದ್ದು, ಆತನ ತಂದೆಯೇ ಕೊಲೆ ಮಾಡಿ, ಆತ್ಮಹತ್ಯೆ ಎಂಬುದಾಗಿ ಬಿಂಬಿಸಿರುವುದು ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಆತ್ಮಹತ್ಯೆ ಅಲ್ಲ ಕೊಲೆ ಎಂಬುದಾಗಿ ಉಲ್ಲೇಖಿಸಿದ್ದು ಕೃತ್ಯ ನಡೆಸಿದ ತಂದೆ ಪ್ರಕಾಶ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಾ ೬ರಂದು ಬಸವೇಶ್ವರ ನಗರದಲ್ಲಿ ಯೋಗೇಶ್(೨೧) ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಆತನ ತಂದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ನಾಟಕವಾಡಿದ್ದರು.
ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಆತನ ತಂದೆ ಬಿಂಬಿಸಿದ್ದರು. ಆದರೆ, ಮಗನ ಕುಡಿತದ ಚಟ ಸಹಿಸಿಕೊಳ್ಳದೆ ಮಗನನ್ನೇ ಆತ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ನಡೆದುದ್ದೇನು?
ಪದವಿ ಓದುತ್ತಿದ್ದ ಯೋಗೇಶ್ ಕುಡಿತದ ದಾಸನಾಗಿದ್ದ. ಪ್ರತಿದಿನ ಆತ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಕುಪಿತಗೊಂಡ ಪ್ರಕಾಶ್, ಕುಡಿತ ಬಿಡುವಂತೆ ಮಗನಿಗೆ ಹಲವು ಬಾರಿ ಬುದ್ದಿವಾದ ಹೇಳಿದ್ದಾರೆ. ಇದೇ ವಿಷಯಕ್ಕೆ ಮಾರ್ಚ್ ೬ ರಂದು ತಂದೆ-ಮಗನ ಮಧ್ಯೆ ಗಲಾಟೆ ನಡೆದಿತ್ತು. ಯೋಗೇಶ್ ಮಾ.೫ ರಂದು ಮನೆಯಿಂದ ಹೋದವನು ಮರುದಿನ ಬೆಳಗ್ಗೆ ಮನೆಗೆ ಬಂದಿದ್ದ ಅಂದು ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಕರೆ ಪತ್ರ(ಹಾಲ್‌ಟಿಕೇಟ್) ಹುಡುಕುತ್ತಾನೆ ಅದು ಸಿಗುವುದಿಲ್ಲ. ಅಲ್ಲೆ ಇದ್ದ ತಂದೆಯನ್ನು ಹುಡುಕಿಕೊಡುವಂತೆ ಕೇಳುತ್ತಾನೆ. ಪರೀಕ್ಷೆ ಇದ್ದರೂ ಭಯವಿಲ್ಲದೇ ನಿನ್ನೆ ರಾತ್ರಿಯಲ್ಲಾ ಈಗ ಮನೆಗೆ ಬಂದಿದ್ದಿಯಾ, ನಿನ್ನ ಹಾಲ್‌ಟಿಕೇಟ್ ನೀನೆ ಹುಡುಕಿಕೊಳ್ಳುವಂತೆ ಕೋಪದಿಂದ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮಗ, ಅಪ್ಪನನ್ನು ಮೇಲಿಂದ ಎತ್ತಿ ಕೆಳಗೆ ಬಿಸಾಕುತ್ತಾನೆ. ಈ ವೇಳೆ ಇಬ್ಬರು ಕೈ ಕೈ ಮಿಲಾಯಿಸುತ್ತಾರೆ. ಈ ವೇಳೆ ಕೆಳಗೆ ಬಿದ್ದ ಮಗನ ಮೇಲೆ ಕುಳಿತ ತಂದೆ ಅಲ್ಲೆ ಇದ್ದ ವೇಲ್‌ನಿಂದ ಮಗನ ಕತ್ತು ಬಿಗಿದು ಕೊಲೆ ಮಾಡಿದ್ದ. ಇದಾದ ಬಳಿಕ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದ. ಪ್ರಕಾಶ್ ಹಾಗೂ ಯೋಗೇಶ್ ಮಧ್ಯೆ ನಡೆದ ಗಲಾಟೆ ಕುರಿತು ಅಕ್ಕಪಕ್ಕದ ಮನೆಯವರಿಗೆ ಗೊತ್ತಿತ್ತು. ಹಾಗಾಗಿ, ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ ಎಂಬುದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಲಾಟೆ ಕುರಿತು ಪೊಲೀಸರಿಗೆ ತಿಳಿಸಿದ್ದರು. ಮನೆ ಪರಿಶೀಲನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೂ ಅನುಮಾನಗಳು ಇದ್ದವು. ಇದಾದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿಯಲ್ಲಿ ಆತ್ಮಹತ್ಯೆ ಅಲ್ಲ ಕೊಲೆ ಎಂದು ಉಲ್ಲೇಖಿಸಿದ್ದರಿಂದ ಕೂಡಲೇ ಆರೋಪಿ ಪ್ರಕಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸಂಗತಿ ಬಯಲಾಗಿದೆ. ಜಗಳದ ವೇಳೆ ಕೋಪದಲ್ಲಾದ ಎಡವಟ್ಟು ಎಂದು ಪೊಲೀಸರ ಎದುರು ಪ್ರಕಾಶ್ ಹೇಳಿದ್ದಾನೆ. ಬಸವೇಶ್ವರ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.