ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಆಪ್ತ ಸಹಾಯಕನ ಸೋಗಿನಲ್ಲಿ ನಕಲಿ ಪೊಲೀಸ್ ಐಡಿ ಕಾರ್ಡ್ ತೋರಿಸಿ 3.50 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯ ಹೇಮಂತ್ (25) ಬಂಧಿತ ಆರೋಪಿ. ಬನಶಂಕರಿ 3ನೇ ಹಂತದ ಶ್ರೀರಂಗನಗರ ನಿವಾಸಿ ನಾಗರಾಜು ಎಂಬಾತನಿಗೆ ಬಿಬಿಎಂಪಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿ ನೌಕರ ನಾಗರಾಜು, 3 ವರ್ಷದ ಹಿಂದೆ ಹೇಮಂತ್ ಪರಿಚಿತನಾಗಿದ್ದ. ಬಂಧಿತ ಆರೋಪಿ ‘ನಾನು ಪೊಲೀಸ್ ಇಲಾಖೆಯ ನೌಕರ. ಎಡಿಜಿಪಿ ದರ್ಜೆಯ ಅಧಿಕಾರಿಯ ಆಪ್ತಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಪೊಲೀಸ್ ಇಲಾಖೆಯ ನಕಲಿ ಗುರುತಿನ ಚೀಟಿ ತೋರಿಸಿದ್ದಾನೆ. ‘ನನಗೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಪರಿಚಯವಿದೆ. ಬಿಬಿಎಂಪಿಯಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆ. ಇದಕ್ಕೆ ಸ್ವಲ್ಪ ಹಣ ಖರ್ಚಾಗಲಿದೆ’ ಎಂದು ಆಮಿಷವೊಡ್ಡಿದ್ದಾನೆ.
ವಂಚಕನ ಮಾತು ನಂಬಿದ ನಾಗರಾಜ್, 3.50 ಲಕ್ಷ ರೂ. ಕೊಟ್ಟಿದ್ದ. ಕೆಲಸ ಕೊಡಿಸದೇ ಇದ್ದಾಗ ಹಣ ವಾಪಸ್ ಕೊಡುವಂತೆ ನಾಗರಾಜ್ ಒತ್ತಾಯ ಮಾಡಿದ್ದಾನೆ. ಹಣ ಕೊಡದೆ ಇದ್ದಾಗ ನಾಗರಾಜ್, ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರೂ ಕಾಲರ್‌ನಲ್ಲಿ ಎಡಿಜಿಪಿ ಹೇಮಂತ್ !
ಆರೋಪಿ ಹೇಮಂತ್, ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಟ್ರೂ ಕಾಲರ್‌ನಲ್ಲಿ ಎಡಿಜಿಪಿ ಹೇಮಂತ್ ಎಂದು ಬರುವಂತೆ ಮಾಡಿಕೊಂಡಿದ್ದ. ಇದನ್ನು ನಂಬಿಯೇ ಹಲವರು ಆರೋಪಿಗೆ ಹಣ ನೀಡಿ ವಂಚನೆಗೆ ಒಳಗಾಗಿದ್ದಾರೆ.