ಕಡೂರು: ತಾಲೂಕಿನ ಉಳ್ಳಿನಾಗರು ಗ್ರಾಮದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣದ ಪ್ರಮುಖ ಆರೋಪಿ, ಕಡೂರಲ್ಲಿ ಈ ಹಿಂದೆ ತಹಸೀಲ್ದಾರ್ ಆಗಿದ್ದ ಜೆ.ಉಮೇಶ್ ಅವರನ್ನು ಕಡೂರು ಮತ್ತು ಬೀರೂರು ಪೊಲೀಸರ ತಂಡ ಶುಕ್ರವಾರ ಬೆಳಗ್ಗೆ ಬೆಂಗಳೂರಲ್ಲಿ ಬಂಧಿಸಿ ಕಡೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು.
ಕೆಎಎಸ್ ಅಧಿಕಾರಿ ಜೆ.ಉಮೇಶ್ ಪ್ರಸ್ತುತ ಕಾರವಾರ ಸೀಬರ್ಡ್ ನೌಕಾನೆಲೆಯ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಕರಣದ ಹಿನ್ನೆಲೆಯಲ್ಲಿ ಅವರನ್ನು ಆ.25ರಂದು ಸಸ್ಪೆಂಡ್ ಮಾಡಲಾಗಿದೆ.
ಉಳ್ಳಿನಾಗರು ಗ್ರಾಮದ ಸರ್ವೇ ನಂ.43ರಲ್ಲಿ 5.04 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಜೆ.ಉಮೇಶ್ ಸೇರಿ ಮೂವರ ವಿರುದ್ಧ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಕಡೂರು ಠಾಣೆಗೆ ಆ.12ರಂದು ದೂರು ಸಲ್ಲಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ಪ್ರಕರಣದ ಪ್ರಮುಖ ಆರೋಪಿ ಜೆ.ಉಮೇಶ್ ಪತ್ತೆಗಾಗಿ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಕಡೂರು ಪಿಎಸ್‌ಐ ಧನಂಜಯ್ ಮತ್ತು ಬೀರೂರು ಪಿಎಸ್‌ಐ ಸಚಿತ್‌ಕುಮಾರ್ ಸೇರಿದಂತೆ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಆರೋಪಿಯು ಬೆಂಗಳೂರಿನ ಪೀಣ್ಯದ ಬಳಿ ಸ್ನೇಹಿತರೊಬ್ಬರ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ವಶಕ್ಕೆ ಪಡೆಯಿತು.
ವಿಚಾರಣೆಗಾಗಿ ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಂ ಅಮಟೆ ಬಳಿಗೆ ಕರೆತಂದು ಬಳಿಕ ಕಡೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಉಳಿದ ಆರೋಪಿಗಳಾದ ನಿವೃತ್ತ ಶಿರಸ್ತೇದಾರ್ ನಂಜುಂಡಯ್ಯ ಹಾಗೂ ಬೀರೂರು ಹೋಬಳಿ ರಾಜಸ್ವ ನಿರೀಕ್ಷಕರಾಗಿದ್ದ ಕಿರಣ್‌ಕುಮಾರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ಪೊಲೀಸರು ಆರೋಪಿ ಜೆ.ಉಮೇಶ ಅವರನ್ನು ಉನ್ನತ ವಿಚಾರಣೆಗಾಗಿ ಪುನಃ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಕರಣದ ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈಗಾಗಲೇ 13 ಜನರ ತಹಸೀಲ್ದಾರರ ತಂಡ ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿದೆ. ಭೂ ಅಕ್ರಮ ಮಂಜೂರಾತಿಗೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಇಂತಹ ಇನ್ನೂ 22 ಪ್ರಕರಣಗಳು ಪತ್ತೆಯಾಗಿವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.