Patna: ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡು ಮತದಾರರ(Dual Voter ID) ಪಟ್ಟಿಗಳಲ್ಲಿ ತಮ್ಮ ಹೆಸರಿರುವ ಕುರಿತಾಗಿ ವಿವರಣೆ ನೀಡುವಂತೆ ಚುನಾವಣಾ ಆಯೋಗವು, ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರನ್ನು ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಕೆ, ನನ್ನ ಕಡೆಯಿಂದ ತಪ್ಪಾಗಿದ್ದರೆ ಬಂಧಿಸುವಂತೆ ಸವಾಲ್ ಹಾಕಿದ್ದಾರೆ.
ಚುನಾವಣಾ ಆಯೋಗವನ್ನು ನೇರ ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ ಪ್ರಶಾಂತ್ ಕಿಶೋರ್, ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ನನ್ನ ಹೆಸರು ಎರಡು ಮತದಾರರ ಪಟ್ಟಿಗಳಲ್ಲಿ ಕಾಣಿಸಿಕೊಂಡರೆ, ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸುವಾಗ ತಮ್ಮ ಹೆಸರನ್ನು ಏಕೆ ತೆಗೆದುಹಾಕಲಿಲ್ಲ ಎನ್ನುವುದಕ್ಕೆ ಆಯೋಗ ವಿವರಣೆ ನೀಡಬೇಕು, ನನ್ನ ಹೆಸರು 2019 ರಿಂದ ಕರಕಟ್‌ನಲ್ಲಿದೆ. ನಾನು ನಡುವೆ ಎರಡು ವರ್ಷಗಳ ಕಾಲ ಬಂಗಾಳಕ್ಕೆ ಹೋಗಿದ್ದೆ, ಆದ್ದರಿಂದ ನಾನು ಅಲ್ಲಿ ಮತದಾರನಾಗಿದ್ದೆ. ಹೀಗಿದ್ದಾಗಲೂ ಚುನಾವಣಾ ಆಯೋಗ ಏಕೆ ನೋಟಿಸ್ ಕಳುಹಿಸುತ್ತಿದೆ.?, ಈ ವಿಷಯದಲ್ಲಿ ನನ್ನ ಕಡೆಯಿಂದ ತಪ್ಪಾಗಿದ್ದರೆ, ನನ್ನನ್ನು ಬಂಧಿಸಿ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾ ಸಂಸದೀಯ ಕ್ಷೇತ್ರದ ಮಣಿಕ್ತಲಾ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 621 ರ ಮತದಾರರ ಪಟ್ಟಿಯಲ್ಲಿ ಕಿಶೋರ್ ಹೆಸರನ್ನು ಸೇರಿಸಲಾಗಿದೆ ಎಂದು ಆಯೋಗವು ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯನ್ನು ಉಲ್ಲೇಖಿಸಿ ತಿಳಿಸಿದೆ. ಇದು ಬಿಹಾರದ ಕರಕಟ್ ವಿಧಾನಸಭಾ ಕ್ಷೇತ್ರದ ಭಾಗವೂ ಆಗಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ, 1950 ರ ಸೆಕ್ಷನ್ 17 ರ ಪ್ರಕಾರ, ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಾರದು. ಈ ನಿಬಂಧನೆಯ ಉಲ್ಲಂಘನೆಯು ಜನತಾ ಪ್ರಾತಿನಿಧ್ಯ ಕಾಯ್ದೆ, 1950 ರ ಸೆಕ್ಷನ್ 31 ರ ಅಡಿಯಲ್ಲಿ ದಂಡದ ಕ್ರಮಕ್ಕೆ ಗುರಿಯಾಗುತ್ತದೆ, ಇದು ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುತ್ತದೆ" ಎಂದು ಪತ್ರದಲ್ಲಿ ಹೇಳಲಾಗಿದೆ. ದಯವಿಟ್ಟು ಮೂರು ದಿನಗಳಲ್ಲಿ ನಿಮ್ಮ ವಿವರಣೆಯನ್ನು ಪ್ರಸ್ತುತಪಡಿಸಿ ಎಂದು ಅದು ಹೇಳಿದೆ. 2021 ರ ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಚಾರ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಬಂಗಾಳದಲ್ಲಿ ಮಾಡಿದ ಭಾಷಣವು ಅವರ ಜೀವನದ ಪ್ರಮುಖ ತಿರುವು ಎನ್ನಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧ ಪಕ್ಷಗಳು, ಮತದಾನದ ಹಕ್ಕನ್ನು ಕಸಿದುಕೊಳ್ಳುವ ತಂತ್ರ ಎಂದು ಕರೆದಿದ್ದು, ಚುನಾವಣಾ ಆಯೋಗ ಎನ್‌ಡಿಎಗೆ ಗೆಲ್ಲಬೇಕು ಎನ್ನುವ ಕಾರಣಕ್ಕೆ ಈ ಪ್ರಕ್ರಿಯೆಯನ್ನು ನಡೆಸುತ್ತಿದೆ, ಎಸ್‌ಐಆರ್ ಮುಖ್ಯವಾಗಿ ವಿರೋಧ ಪಕ್ಷಕ್ಕೆ ಮತ ಹಾಕುವ ಬಡವರನ್ನು ಮಾತ್ರ ಗುರಿಯಾಗಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.(ಏಜೆನ್ಸೀಸ್)