ನ್ಯೂಸ್

ರಂಪಾಟ ಮಾಡಿದ್ದ ಯುವತಿಯ ಬಂಧನ, ಬಿಡುಗಡೆ

ಬೆಂಗಳೂರು: ಯುವತಿಯೊಬ್ಬಳು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಸಾರ್ವಜನಿಕವಾಗಿ ಪೊಲೀಸ್ ಸಿಬ್ಬಂದಿಯ ಸಮವಸ ಹಿಡಿದು ಎಳೆದಾಡಿ ಬಾಡಿ ವೋರ್ನ್ ಕ್ಯಾಮೆರಾ ಕಿತ್ತೆಸೆದು ರಂಪಾಟ ಮಾಡಿರುವ ಘಟನೆ ಇಂದಿರಾನಗರದ ಇಎಸ್‌ಐ ಜಂಕ್ಷನ್ ಬಳಿ ಗುರುವಾರ ನಡೆದಿದೆ.

ಈ ಸಂಬಂಧ ಜೆ.ಬಿ.ನಗರ ಸಂಚಾರ ಠಾಣೆ ಕಾನ್‌ಸ್ಟೇಬಲ್ ಶರತ್ ಅವರು ದೂರು ದಾಖಲಿಸಿದ್ದು, ಇಂದಿರಾನಗರ ಠಾಣೆ ಪೊಲೀಸರು ಯುವತಿ ಸೋನಂಳನ್ನು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಸೋನಂ, ಇಂದಿರಾನಗರದ ಪೇಯಿಂಗ್ ಗೆಸ್ಟ್‌ನಲ್ಲಿ (ಪಿ.ಜಿ)ವಾಸವಾಗಿದ್ದಾಳೆ. ಆಕೆ ಗುರುವಾರ ಬೆಳಗ್ಗೆ ಇಎಸ್‌ಐ ಜಂಕ್ಷನ್‌ನಲ್ಲಿ ವಿನಾಕಾರಣ ಸಾರ್ವಜನಿಕರ ವಾಹನಗಳನ್ನು ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ್ದಾಳೆ. ಇದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಈ ವೇಳೆ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಶರತ್ ಅವರು ಸ್ಥಳಕ್ಕೆ ಬಂದು ಯುವತಿ ಸೋನಂಗೆ ಬುದ್ಧಿಮಾತು ಹೇಳಿ, ಸಂಚಾರ ಸುಗಮಗೊಳಿಸಲು ಯತ್ನಿಸಿದ್ದಾರೆ. ಇದರಿಂದ ಕೆರಳಿದ ಸೋನಂ, ಸಾರ್ವಜನಿಕರ ಸಮ್ಮುಖದಲ್ಲೇ ಶರತ್ ಸಮವಸದ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾಳೆ.

ನಂತರ ಶರತ್‌ರ ಬಾಡಿ ವೋರ್ನ್ ಕ್ಯಾಮೆರಾ ಕಿತ್ತೆಸೆದು ಅವಾಚ್ಯವಾಗಿ ನಿಂದಿಸಿ ರಂಪಾಟ ಮಾಡಿದ್ದಾಳೆ. ಈ ವೇಳೆ ಶರತ್‌ರ ರಕ್ಷಣೆಗೆ ಧಾವಿಸಿದ ಇತರೆ ಪೊಲೀಸ್ ಸಿಬ್ಬಂದಿಗೂ ಸೋನಂ ಮನಸೋ-ಇಚ್ಛೆ ನಿಂದಿಸಿದ್ದಾಳೆ. ಬಳಿಕ ಪೊಲೀಸರು ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಹಿಡಿದು ಇಂದಿರಾನಗರ ಠಾಣೆಗೆ ಎಳೆದೊಯ್ದರು. ಖಾಸಗಿ ಕಂಪನಿ ಉದ್ಯೋಗಿಯಾದ ಸೋನಂ, ಮಾನಸಿಕ ಅಸ್ವಸ್ಥೆ. ಆಕೆ ಈ ಹಿಂದೆಯೂ ಹಲವು ಬಾರಿ ಇದೇ ರೀತಿ ರಂಪಾಟ ಮಾಡಿದ್ದಳು. ಆಕೆಯ ದುರ್ವತನೆ ಸಂಬಂಧ ಕಾನ್‌ಸ್ಟೇಬಲ್ ಶರತ್ ಅವರು ದೂರು ಕೊಟ್ಟಿದ್ದಾರೆ. ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆಗೆ ಯತ್ನ ಹಾಗೂ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸೋನಂಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.