ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮೇ7ರಂದು ಮತದಾನ ನಡೆಯಲಿದ್ದು, ಇನ್ನೇನಿದ್ದರೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕಿದೆ.
ಸೋಮವಾರ ಬೆಳಗ್ಗೆ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಸಿಬ್ಬಂದಿ ಗುರುತಿಸಲ್ಪಟ್ಟ ಸ್ಥಳಗಳಿಂದ ಮತದಾನಕ್ಕೆ ಪೂರಕ ಸಾಮಗ್ರಿಗಳನ್ನು ನಿರ್ದಿಷ್ಟಪಡಿಸಿದ ಮತಗಟ್ಟೆಗಳಿಗೆ ಕೊಂಡೊಯ್ಯಲಿದ್ದಾರೆ.
ಮತಗಟ್ಟೆಗಳಲ್ಲಿ ಮತದಾರರಿಗೆ ಚುನಾವಣಾ ಆಯೋಗ ಮೂಲಸೌಕರ್ಯ ಕಲ್ಪಿಸಿದೆ. ಬಿಸಿಲಿನ ಬೇಗೆಯಿಂದ ಮತದಾನ ಕಡಿಮೆಯಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳಲ್ಲಿ ಜ್ಯೂಸ್, ಕುಡಿಯಲು ನೀರು, ಕುಳಿತುಕೊಳ್ಳಲು ಕುರ್ಚಿ, ನೆರಳಿಗೆ ಶಾಮಿಯಾನ ಮತ್ತಿತರ ಸವಲತ್ತುಗಳನ್ನು ಕಲ್ಪಿಸಿದೆ.
ಮತದಾನದ ಅವಧಿ ಮುಗಿಯುವವರೆಗೆ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಬೇರೆ ರಾಜ್ಯಗಳಿಂದಲೂ ಮದ್ಯ ತರುವಂತಿಲ್ಲ. ಕರ್ನಾಟಕ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಇತರ ರಾಜ್ಯಗಳ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ.
ನೆರೆಯ ರಾಜ್ಯಗಳ ರಾಜ್ಯ ಸರ್ಕಾರಗಳಿಗೆ ಮತದಾನ ಮಾಡಲು ಅವಕಾಶ ನೀಡಲು ಎಲ್ಲ ಉದ್ಯೊಗಿಗಳು ಮತ್ತು ಕಾರ್ಮಿಕರಿಗೆ ಮೇ 7ರಂದು ವೇತನ ಸಹಿತ ರಜೆ ನೀಡುವಂತೆ ಕೋರಲಾಗಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮತದಾನದ ದಿನ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ.
ಒಟ್ಟು 2,59,52,958 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರಿಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಎಲ್ಲ 14 ಕ್ಷೇತ್ರ್ರಗಳಲ್ಲೂ ಸ್ಫರ್ಧಿಸಿವೆ. ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 73 ಹಾಗೂ 117 ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ 206 ಪುರುಷರು, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಚುನಾವಣಾ ಪ್ರಕ್ರಿಯೆ ವೀಕ್ಷಿಸಲು ಐದು ದೇಶಗಳ ಅಂತಾರಾಷ್ಟ್ರೀಯ ಚುನಾವಣಾ ಆಯುಕ್ತರು ಬೆಳಗಾವಿಗೆ ಆಗಮಿಸಿದ್ದು, ಸೋಮವಾರ ಮತ್ತು ಮಂಗಳವಾರ ಚುನಾವಣಾ ಸಿದ್ಧತೆ, ಮತದಾನದ ಪಾರದರ್ಶಕತೆಯನ್ನು ಪರಿವೀಕ್ಷಣೆ ಮಾಡಲಿದ್ದಾರೆ.