ನ್ಯೂಸ್

ಕಂದಕಕ್ಕೆ ಉರುಳಿದ ಸೇನಾ ವಾಹನ; ಮೂವರು ಸಿಆರ್‌ಪಿಎಫ್ ಯೋಧರು ಸಾವು; 15 ಮಂದಿಗೆ ಗಾಯ| jammu-kashmir

ಉಧಂಪುರ : ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಇಂದು (ಆ.07) ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಬಸಂತ್ ಘರ್ ನಿಂದ ಕಾರ್ಯಾಚರಣೆ ಮುಗಿಸಿ ಸಿಬ್ಬಂದಿ ಹಿಂತಿರುಗುತ್ತಿದ್ದಾಗ ಕಡ್ವಾ ಪ್ರದೇಶದಲ್ಲಿ ಬೆಳಗ್ಗೆ 10:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಪಘಾತಕ್ಕೀಡಾದ ಈ ವಾಹನವು ಪಡೆಯ 187 ಬೆಟಾಲಿಯನ್​ಗೆ ಸೇರಿದೆ.  ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಗಾಯಗೊಂಡ ಎಲ್ಲರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಇನ್ನೂ ಈ ಘಟನೆಯ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರತಿಕ್ರಿಯಿಸಿದ್ದು, ಕಾಂಡ್ವಾ-ಬಸಂತ್‌ ಗಢ ಪ್ರದೇಶದಲ್ಲಿ ಸಿಆರ್‌ಪಿಎಫ್ ವಾಹನಕ್ಕೆ ಅಪಘಾತ ಸಂಭವಿಸಿದ ಸುದ್ದಿ ಕೇಳಿ ಬೇಸರವಾಯಿತು. ಹನವು ಸಿಆರ್‌ಪಿಎಫ್‌ನ ಹಲವಾರು ಧೈರ್ಯಶಾಲಿ ಯೋಧರನ್ನು ಹೊತ್ತೊಯ್ಯುತ್ತಿತ್ತು. ನಾನು ಇದೀಗ ಜಿಲ್ಲಾಧಿಕಾರಿ ಸಲೋನಿ ರೈ ಅವರೊಂದಿಗೆ ಮಾತನಾಡಿದ್ದೇನೆ. ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಹಾಗೂ ನನಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಪಘಾತದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಂತಾಪ ಸೂಚಿಸಿದ್ದು, ಸಾಧ್ಯವಾದಷ್ಟು ಸಹಾಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಉಧಂಪುರ ಬಳಿ ಅಪಘಾತದಿಂದಾಗಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖಕರವಾಗಿದೆ. ರಾಷ್ಟ್ರಕ್ಕೆ ಅವರ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

(ಏಜೆನ್ಸೀಸ್)