ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ಚೀನಾ ಯೋಧರೊಂದಿಗೆ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಗಾಯಗೊಂಡಿರುವ ವೀರಯೋಧರ ಚಿಕಿತ್ಸೆಗೆ ಲೇಹ್ ಆಸ್ಪತ್ರೆಯಲ್ಲಿ ಸಮರ್ಪಕವಾದ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಟೀಕೆ ದುರುದ್ದೇಶಗಳಿಂದ ಕೂಡಿದ್ದು, ವೀರಾಗ್ರಣಿಯರಿಗೆ ಅಪಮಾನ ಮಾಡುವಂತಿದೆ ಎಂದು ಭಾರತೀಯ ಸೇನಾಪಡೆ ಅಧಿಕಾರಿಗಳು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಲೇಹ್ ಆಸ್ಪತ್ರೆಯಲ್ಲಿರುವ ಹುಳುಕುಗಳನ್ನು ಮುಚ್ಚಿಡಲು ಪರ್ಯಾಯ ವ್ಯವಸ್ಥೆ ಮಾಡಿ ಕಣ್ಣಿಗೆ ಮಣ್ಣೆರೆಚಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಇದು ದುರುದ್ದೇಶಪೂರಿತವಾದ, ಆಧಾರರಹಿತ ಆರೋಪ ಎಂದು ಸೇನಾಪಡೆ ಹೇಳಿದೆ.
ಸೇನಾಪಡೆಯಲ್ಲಿ ಯೋಧರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯವನ್ನು ಕೊಡಲಾಗುತ್ತದೆ. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ತಿಳಿಸಿದೆ.
ಲೇಹ್ನ ಸಾರ್ವಜನಿಕ ಆಸ್ಪತ್ರೆ ಸಮುಚ್ಚಯದಲ್ಲಿ ತುರ್ತು ಅಗತ್ಯಗಳಿಗೆ ಸ್ಪಂದಿಸಲು 100 ಹಾಸಿಗೆ ಸಾಮರ್ಥ್ಯವನ್ನು ಹೊಸದಾಗಿ ವಿಸ್ತರಣೆ ಮಾಡಲಾಗಿದೆ. ಕೋವಿಡ್-19 ಪಿಡುಗು ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಷನ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತರಬೇತಿಗಾಗಿ ಮೀಸಲಾಗಿರುವ ಆಡಿಯೋ-ವಿಡಿಯೋ ಹಾಲ್ ಅನ್ನು ತಾತ್ಕಾಲಿಕವಾಗಿ ಯೋಧರ ಚಿಕಿತ್ಸಾ ವಿಭಾಗವಾಗಿ ಮಾರ್ಪಡಿಸಲಾಗಿದೆ. ತನ್ಮೂಲಕ ಯೋಧರು ಕೋವಿಡ್-19 ಸೋಂಕಿಗೆ ತುತ್ತಾಗದಂತೆ ಎಚ್ಚರವಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗಲ್ವಾನ್ ಕಣಿವೆಯ ಘರ್ಷಣೆಯ ಬಳಿಕ ಲೇಹ್ಗೆ ಭೇಟಿ ನೀಡಿದ್ದ ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಾನೆ ಕೂಡ ಯೋಧರನ್ನು ಇಲ್ಲಿಯೇ ಭೇಟಿಯಾಗಿದ್ದರು. ಆಗ ವ್ಯಕ್ತವಾಗದಿದ್ದ ಅನುಮಾನಗಳು ಪ್ರಧಾನಿ ಮೋದಿ ಅವರ ಭೇಟಿಯ ಬಳಿಕ ಏಕೆ ಬಂದಿತು ಎಂದು ಪ್ರಶ್ನಿಸಿದ್ದಾರೆ.