ನ್ಯೂಸ್

ಪುಟ್ಟ ಮಗಳಿಗೆ ಅಪರೂಪದ ಕಾಯಿಲೆ; 1,100 ಕಿ.ಮೀ.ದೂರ ಬರಿಗಾಲಿನಲ್ಲಿ ನಡೆದ ಅಪ್ಪ, ನಿಂತಿಲ್ಲ ಇನ್ನೂ ಹೋರಾಟ

ತನ್ನ ರೋಗಗ್ರಸ್ತ ಮಗಳ ಚಿಕಿತ್ಸೆಗಾಗಿ ಹಣ ಸಂಗ್ರಹಿಸಲು ಈ ಆರ್ಮಿ ಮೇಜರ್​ ಸುಮಾರು 1,100 ಕಿಮೀಗಳಷ್ಟು ದೂರವನ್ನು ನಡೆದೇ ಸಾಗಿದ್ದಾರೆ.

ಇವರ ಹೆಸರು ಕ್ರಿಸ್​ ಬ್ರಾನಿಗನ್​. ಇಂಗ್ಲೆಂಡಿನ ಕಾರ್ನ್ ವಾಲ್ ಪ್ರದೇಶದ ಪಶ್ಚಿಮದ ತುದಿಯಿಂದ ಸ್ಕಾಟ್ಲೆಂಡ್​​ನ ಎಡಿನ್​ಬರ್ಗ್​ವರೆಗೆ ಕಾಲಿಗೆ ಚಪ್ಪಲಿಯನ್ನೂ ಹಾಕದೆ, 25 ಕೆಜಿ ತೂಕದ ಬ್ಯಾಗ್​ ಹೊತ್ತು ನಡೆದಿದ್ದಾರೆ. ಹಣವನ್ನು ಸಂಗ್ರಹಿಸುತ್ತ ಹೆಜ್ಜೆ ಹಾಕಿದ್ದಾರೆ.

ನನಗೆ ಗೊತ್ತು ಇದು ಹುಚ್ಚುತನ. ವಿಫಲವಾಗುವ ಭಯದಲ್ಲಿದ್ದೇನೆ. ತುಂಬ ನೋವಾಗುತ್ತಿದೆ. ಈಗಾಗಲೇ ಮೊಣಕಾಲಿಗೆ ಗಾಯವಾಗಿದೆ. ಆದರೆ ನಾನೊಬ್ಬ ಅಪ್ಪ. ನಾನು ನನ್ನ ಪುಟ್ಟ ಮಗಳು ಹಸ್ತಿಗಾಗಿ ಹೋರಾಟ ಮಾಡಲೇಬೇಕು. ಹಾಗೇ ನನ್ನ ಮಗಳಿಗೆ ಬಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಉಳಿದ ಮಕ್ಕಳಿಗೂ ಸಹಾಯ ಮಾಡುವ ಬಯಕೆ ಇದೆ ಎಂದು ಕ್ರಿಸ್​ ಅವರು ತಮ್ಮ ದೇಣಿಗೆ ಸಂಗ್ರಹದ ಪುಸ್ತಕದ ಪೇಜ್​​ನಲ್ಲಿ ಬರೆದಿದ್ದಾರೆ. ಇದನ್ನು ತೋರಿಸಿ ಹಣ ಸಂಗ್ರಹ ಮಾಡುತ್ತಿದ್ದಾರೆ.

ಕ್ರಿಸ್​ ಪುತ್ರಿ ಹಸ್ತಿಗೆ ಎಂಟು ವರ್ಷ. ಕಾರ್ನೆಲಿಯಾ ಡಿ ಲ್ಯಾಂಗ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸಿಂಡ್ರೋಮ್​ ಇರುವವರು ಮಕ್ಕಳಾಗಿದ್ದರೂ ವಯಸ್ಸಾದವರಂತೆ ತೋರುತ್ತಾರೆ. ಹಾಗೇ ಮಾನಸಿಕ ಸ್ಥಿತಿಯೂ ಹದಗೆಡುತ್ತದೆ. ಆತಂಕಕ್ಕೀಡಾಗುತ್ತಾರೆ. ಹಸ್ತಿಗೆ 2018ರಲ್ಲಿ ಈ ಕಾಯಿಲೆ ಇರುವುದು ಬೆಳಕಿಗೆ ಬಂದಿದೆ. ಆದರೆ ಇದುವರೆಗೂ ಸರಿಯಾದ ಚಿಕಿತ್ಸೆ ಮಗುವಿಗೆ ದೊರೆತಿಲ್ಲ. ಇದನ್ನೂ ಓದಿ: ಚೀನಾ ಮೇ ನಲ್ಲೇ ಭಾರತದ ಭೂಪ್ರದೇಶ ಅತಿಕ್ರಮಣ ಮಾಡಿತ್ತು ಎಂಬ ವಿವರವನ್ನು ವೆಬ್​ಸೈಟ್​ನಿಂದ ಡಿಲೀಟ್​ ಮಾಡಿದ ರಕ್ಷಣಾ ಸಚಿವಾಲಯ

ತಮ್ಮ ಮಗಳಿಗೆ ಸಿದಿಎಲ್​ಎಸ್​ ಕಾಯಿಲೆ ಇದೆ ಎಂದು ಗೊತ್ತಾದಾಗ ಕ್ರಿಸ್​ ಹಾಗೂ ಅವರ ಪತ್ನಿ ಇಬ್ಬರೂ ತೀವ್ರ ದುಃಖಿತರಾಗಿದ್ದರು. ಎರಡು ವರ್ಷಗಳಿಂದಲೂ ಹಣವಿಲ್ಲದೆ, ಸರಿಯಾದ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ಇಲ್ಲದೆ ಕಳೆದ ದಂಪತಿ, ಕಳೆದ ತಿಂಗಳು ಒಂದು ಚಾರಿಟಿಯನ್ನು ಸ್ಥಾಪಿಸಿದ್ದಾರೆ. ಇದಕ್ಕೆ ಹೋಪ್​ ಫಾರ್​ ಹಸ್ತಿ ಎಂಬ ಹೆಸರಿಟ್ಟಿದ್ದಾರೆ.

ಇದೀಗ ಕ್ರಿಸ್​ ಹಣ ಸಂಗ್ರಹಕ್ಕಾಗಿ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. ಹಾಗೇ ಅಪರೂಪದ ಕಾಯಿಲೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಸಲುವಾಗಿ, ಅದಕ್ಕೆ ಸಹಿ ಕೂಡ ಹಾಕಿಸಿಕೊಳ್ಳುತ್ತಿದ್ದಾರೆ. ಕ್ರಿಸ್​ ಅವರು ವೃತ್ತಿಯಲ್ಲಿ ಯೋಧ. ಈಗಾಗಲೇ 28 ದಿನಗಳಿಂದ ಅವರು ನಡೆಯುತ್ತಿದ್ದಾರೆ. (ಏಜೆನ್ಸೀಸ್​)