ಕೆ.ಆರ್.ನಗರದ ಹಳೆ ಎಡತೊರೆಯ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿನೂತನ ಗೋಪುರ ಕಳಸ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರವದಲ್ಲಿ ಭಾಗಿಯಾದ ಶಾಸಕ ಡಿ.ರವಿಶಂಕರ್ ಮತ್ತು ಸುನಿತಾರವಿಶಂಕರ್ ದಂಪತಿ.  
ನ್ಯೂಸ್

ಫೆ.16ಕ್ಕೆ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ರಥೋತ್ಸವ

ಕೆ.ಆರ್.ನಗರ: ಕಳೆದ ನಾಲ್ಕು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಮೀನಾಕ್ಷಿ ಸಮೇತ ಅರ್ಕೇಶ್ವರಸ್ವಾಮಿ ರಥೋತ್ಸವವನ್ನು ಫೆ.16ರಂದು ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಮಾಹಿತಿ ನೀಡಿದರು.


ಪಟ್ಟಣದ ಹಳೇ ಎಡತೊರೆ ಕಾವೇರಿ ನದಿ ದಂಡೆಯಲ್ಲಿರುವ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಮೀನಾಕ್ಷಿ ಅಮ್ಮನವರ ಗುಡಿಯ ನೂತನ ಗೋಪುರ ಕಲಶ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತ್ರೆ ನಡೆಸುವ ಸಂಬಂಧ ಫೆಬ್ರವರಿ ಮೊದಲ ವಾರದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.


ಕಳೆದ 3 ದಿನಗಳಿಂದ ದೇವಾಲಯದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದು ಸಂಪನ್ನಗೊಂಡಿದ್ದು, ನಾಳೆಯಿಂದಲೇ ಜಾತ್ರೆ ನಡೆಸುವ ಸಂಬಂಧ ತಹಸೀಲ್ದಾರರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಗಮನ ಹರಿಸುವಂತೆ ಸೂಚಿಸಲಾಗಿದೆ. ದೇವಾಲಯದ ಆವರಣದಲ್ಲಿ ಜಾತ್ರಾ ಸಮಯ ನಡೆಯುವ ಜಾನುವಾರು ಜಾತ್ರೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಬರುವ ರೈತರಿಗೆ ಮೂಲಸೌಕರ್ಯ ಕಲ್ಪಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಅರ್ಕೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಜತೆಗೆ ಕಾವೇರಿ ನದಿ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಿರುವ ಶಿವನ ಪ್ರತಿಮೆಯ ಕಾಮಗಾರಿಗೆ ವೇಗ ನೀಡಿ ಮುಂದಿನ ವರ್ಷದ ರಥೋತ್ಸವದ ವೇಳೆಗೆ ಪ್ರತಿಮೆ ಅನಾವರಣ ಮಾಡಲಾಗುವುದು. ಈ ಸಂಬಂಧ ಗುತ್ತಿಗೆದಾರರು ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಪತ್ನಿ ಶಾಂತಮ್ಮ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಪತ್ನಿ ವನಜಾಕ್ಷಮ್ಮ, ಸುನೀತಾ ರವಿಶಂಕರ್, ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಮಿಕ್ಸರ್ ಶಂಕರ್, ಶಂಕರ್‌ಸ್ವಾಮಿ, ನಗರ ಯೋಜನಾ ಪ್ರಾಧಿಕಾರಿದ ಮಾಜಿ ನಿರ್ದೇಶಕರಾದ ಕೆ.ಎಸ್.ಮಹೇಶ್, ಸೈಯದ್‌ಜಾಬೀರ್, ಕೆ.ಎನ್.ಪ್ರಸನ್ನಕುಮಾರ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಜಿ.ಕೆ.ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲತಾರವಿ, ಎಚ್.ವಿ.ರಾಣಿ ಬಾಲಶಂಕರ್, ಮತ್ತಿತರರು ಇದ್ದರು.